ಬೆಪ್ಪು ಮಾಡುವ ಸಿಂಗಂ ಸಿಂಹಿಣಿ ಬಗ್ಗೆ ಎಚ್ಚರ ವಹಿಸಿ: ರವಿಕಾಂತೇಗೌಡ

ಬೆಂಗಳೂರು,ಜೂ.8-ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಇತರೆ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು, ‘ಸಿಂಗಂ’ ಹಾಗೂ ‘ಸಿಂಹಿಣಿ’ ಎಂಬ ಬಿರುದು ಪಡೆದುಕೊಂಡು ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುತ್ತಾ ಜನರನ್ನು ಬೆಪ್ಪು ಮಾಡುತ್ತಿರುವ ಬೆಳವಣಿಗೆಯ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ‘ಕಪ್ಪು-ಬಿಳುಪು ಚಿತ್ರಗಳ ಮೂಲಕ ಜನರನ್ನು ಬೆಪ್ಪು ಮಾಡುವ ಅಪಾಯಕಾರಿ ಅಧಿಕಾರಿಗಳಿಗೆ ಲಿಂಗ ಬೇಧವಿಲ್ಲ. ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರದಿಂದ ಇರುವುದು ಒಳ್ಳೆಯದು ಎಂದಿದ್ದಾರೆ.
‘ಅಧಿಕಾರಿಶಾಹಿ, ಬ್ರಿಟಿಷಶಾಹಿ ಮನೋಭಾವದಿಂದ ಆಚೆ ಬಾರದೆ ವಿಜೃಂಭಿಸುತ್ತಿರುವುದು ಹಾಗೂ ಸಾರ್ವಜನಿಕ ಹಣವನ್ನು ದುಂದು ಮಾಡಿದರೂ ಕೆಲವರು ಭೇಷ್ ಎನಿಸಿಕೊಳ್ಳುತ್ತಿರುವುದರಿಂದ ಎಚ್ಚರಿಕೆ ನೀಡುತ್ತಿದ್ದೇನೆ.
ಕಳೆದ ದಶಕದಲ್ಲಿ ಆದ ಒಂದು ಬೆಳವಣಿಗೆಯನ್ನು ನಾವೆಲ್ಲ ಗಮನಿಸಬೇಕು. ತಂತ್ರಜ್ಞಾನದ ಅರಿವುಳ್ಳವರು ಅಧಿಕಾರಶಾಹಿಯಲ್ಲಿ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣ ಮೂಲಕ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ತಾವಷ್ಟೇ ಪ್ರಾಮಾಣಿಕರು ಎಂಬುದಾಗಿಯೂ ತಾವು ಸಿಂಗಂ, ಸಿಂಹಿಣಿಯರೆಂದೂ ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು.
‘ಕೆಲವರು, ತಮ್ಮದೇ ಅಭಿಮಾನಿಗಳ ಫೇಸ್‌ಬುಕ್‌ ಪುಟಗಳನ್ನು ಆರಂಭಿಸಿದರು. ತಾವು ಮಾಡಬೇಕಾದ ಕೆಲಸಗಳನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸದೆ, ತಮ್ಮ ವಿಶಿಷ್ಟತೆಯೆಂದು ಪ್ರಚಾರಕ್ಕಿಳಿದರು. ಆಡಳಿತದ ಹೊರವಲಯದಲ್ಲಿರುವ ಮುಗ್ಧ ಜನರಲ್ಲಿ ತಾವು ಅವರ ಉದ್ಧಾರಕ್ಕೆ ಬಂದ ಅವತಾರ ಪುರುಷರೆಂದು ನಂಬಿಸತೊಡಗಿದರು. ಇವರಿಂದ ಸ್ಫೂರ್ತಿ ಪಡೆದಂತಹ ಸಿನೆಮಾಗಳು ಬಂದು ಹೀರೋಗಳಾಗಿ ವಿಜೃಂಭಿಸಿದರು. ಅಸಲಿಗೆ, ಇಂಥ ಅಧಿಕಾರಿಗಳ ಅವತಾರಗಳನ್ನು ಅವರ ಒಳ–ಹೊರಗು ಬಲ್ಲವರು ಕಂಡು ಹೇಸುತ್ತಾರೆ’ ಎಂದೂ ರವಿಕಾಂತೇಗೌಡ ಅಭಿಪ್ರಾಯಪಟ್ಟಿದ್ದಾರೆ.
‘ಉದಾಹರಣೆಗೆ ಈಶಾನ್ಯ ರಾಜ್ಯದಿಂದ ಬಂದಿದ್ದ ಒಬ್ಬ ಐಪಿಎಸ್ ಅಧಿಕಾರಿಯ ಬಗ್ಗೆ ಹಬ್ಬಿದ್ದ ರೋಚಕ ಕತೆಗಳು ಹಾಗೂ ಸಾಹಸಗಳು ನಿಜವೆಂದು ನಾನು ನಂಬಿದ್ದೆ, ನಾನು ಇಲಾಖೆಗೆ ಬಂದು ಆತನ ಅವತಾರಗಳನ್ನು ಕಂಡು ಗಾಬರಿಯಾದೆ. ಪ್ರಾಮಾಣಿಕರು, ದಕ್ಷರು ಸದ್ದಿಲ್ಲದೆ ಕೆಲಸ ಮಾಡುವುದನ್ನೂ ಕಂಡೆ.’
‘ಅಧಿಕಾರಿಗಳಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಯಷ್ಟೇ ಅನಾಮಿಕತೆಯು ಮುಖ್ಯವಾದದ್ದು. ಕೆಲಸ ಯಶಸ್ವಿಯಾದಾಗ ಆ ಗೆಲುವು ಇಡೀ ತಂಡಕ್ಕೆ ನೀಡುವುದು ಮುಖ್ಯ’ ಎಂದಿದ್ದಾರೆ.