ಬೆನ್ನು ನೋವಿಗೆ ಮನೆ ಮದ್ದು

ಬೆನ್ನು ನೋವು ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಆರೋಗ್ಯ ಸಮಸ್ಯೆ. ನಮ್ಮ ಜೀವನ ಶೈಲಿ ಹಾಗೂ ಆರೋಗ್ಯ ಪದ್ಧತಿಯಿಂದಾಗಿ ಶೇ. 84ರಷ್ಟು ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಯು ಇದ್ದಕ್ಕಿದ್ದಂತೆ ಕಾಡಬಹುದು. ಇಲ್ಲವೇ ನಿಧಾನವಾಗಿ ಪುನರಾವರ್ತಿತ ಚಲನೆಯೊಂದಿಗೆ ಸಂಭವಿಸಬಹುದು. ಬೆನ್ನು ನೋವು ಸಾಮಾನ್ಯವಾದ ಸಮಸ್ಯೆ ಎನಿಸಬಹುದು. ಆದರೆ ಇದರ ಆಗಮನವು ದಿನನಿತ್ಯದ ನಮ್ಮ ಯೋಜನೆಗಳನ್ನು ಕುಂಠಿತಗೊಳಿಸುವುದು. ಹಾಗಾಗಿ ಈ ಆರೋಗ್ಯ ಸಮಸ್ಯೆಯನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವಂತೆಯೂ ಇಲ್ಲ. ಆರಂಭದಲ್ಲಿ ಸಣ್ಣ ಆರೋಗ್ಯ ಸಮಸ್ಯೆ ಎನಿಸುತ್ತದೆಯಾದರೂ ಕಾಲಕ್ರಮೇಣ ಇನ್ನಿತರ ಆರೋಗ್ಯ ಸಮಸ್ಯೆಗಳೊಂದಿಗೆ ಉಲ್ಭಣಗೊಳ್ಳುವುದು. ಬೆನ್ನು ನೋವಿಗೆ ಕಾರಣಗಳು ಯಾವುದೋ ಒಂದು ವಿಷಯಕ್ಕೆ ಸೀಮಿತವಾಗಿರುವುದಿಲ್ಲ.
ಬೆನ್ನುಮೂಳೆಯ ವಿಶ್ರಾಂತಿ ಕ್ರಮ: ಬೆನ್ನು ನೋವು ಕತ್ತಿನಿಂದ ಪಕ್ಕೆಲುಬುಗಳ ಕಡೆಗೆ ಅಥವಾ ಮೇಲ್ಭಾಗ ಮತ್ತು ಮಧ್ಯಮ ಭಾಗದಲ್ಲಿ ಎಲ್ಲಿಯಾದರೂ ಸಂಭವಿಸಬಹುದು. ಕ್ರೀಡೆಗಳು, ವ್ಯಾಯಾಮ, ಗಾಯ ಹಾಗೂ ಕೆಲಸದ ಒತ್ತಡ ಹೆಚ್ಚಾದಾಗ ಪುನರಾವರ್ತಿತ ಚಲನೆಯ ಮೂಲಕ ಕಾಣಿಸಿಕೊಳ್ಳುವುದು. ಹಾಗಾಗಿ ಸೂಕ್ತ ವಿಶ್ರಾಂತಿಯನ್ನು ಹೊಂದುವುದರ ಮೂಲಕ ಬೆನ್ನು ಮೂಳೆಯ ಮೇಲೆ ಉಂಟಾಗುವ ಒತ್ತಡವನ್ನು ತಡೆಯಬೇಕು. ಆಗ ನೋವನ್ನು ನಿಯಂತ್ರಣದಲ್ಲಿ ಇಡಬಹುದು.
ಪರ್ಯಾಯ ಕ್ರಮವಾಗಿ ಐಸ್ ಅಥವಾ ಶಾಖದ ಪ್ಯಾಡ್ ಬಳಸುವುದು: ಬೆನ್ನು ನೋವು ನಿವಾರಣೆಗೆ ಐಸ್ ಅಥವಾ ಶಾಖದ ಪ್ಯಾಡ್ ಬಳಸುವ ಮೂಲಕ ನೋವನ್ನು ನಿವಾರಿಸಬಹುದು. ಈ ಎರಡು ಕ್ರಮಗಳನ್ನು ಪರ್ಯಾಯವಾಗಿ ಬಳಸುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಜೊತೆಗೆ ನೋವು ನಿವಾರಣೆಯು ಸುಲಭವಾಗಿ ಆಗುವುದು. ಉತ್ತಮ ಫಲಿತಾಂಶ ಪಡೆಯಲು ಈ ಎರಡು ಕ್ರಮಗಳನ್ನು ಕಡಿಮೆ ಎಂದರೂ 25 ನಿಮಿಷಗಳ ಕಾಲ ಅನುಸರಿಸಬೇಕು.
ಎಪ್ಸಮ್ ಉಪ್ಪಿನ ಸ್ನಾನ: ಬೆಚ್ಚಗಿನ ಎಪ್ಸಮ್ ಉಪ್ಪಿನಲ್ಲಿ ಸ್ನಾನ ಮಾಡುವುದರ ಮೂಲಕವು ಬೆನ್ನು ನೋವನ್ನು ನಿವಾರಿಸಬಹುದು. ಈ ಸ್ನಾನವು ಬೆನ್ನುನೋವು ಹಾಗೂ ಉರಿಯೂತವನ್ನು ಗಣನೀಯವಾಗಿ ಕಡಿಮೆ ಮಾಡುವುದು. ಉಪ್ಪಿನಲ್ಲಿರುವ ಮ್ಯಾಗ್ನೀಸಿಯಮ್ ಸ್ನಾಯುಗಳಿಗೆ ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ. ಹಾಗಾಗಿ ನೀರನ್ನು ಹೆಚ್ಚು ಬಿಸಿಮಾಡದೆ 30 ನಿಮಿಷಗಳ ಕಾಲಕ್ಕಿಂತಲೂ ಅಧಿಕ ಸಮಯದ ವರೆಗೆ ಮುಳುಗಿರಬಾರದು. ಹೀಗೆ ಮಾಡುವುದರಿಂದ ನಿರ್ಜಲೀಕರಣ ಉಂಟಾಗುವುದು.
ಉತ್ತಮ ಭಂಗಿ: ಅನುಚಿತ ರೀತಿಯ ಭಂಗಿಯನ್ನು ಹೊಂದುವುದರಿಂದ ಬೆನ್ನು ಮೂಳೆಯ ಮೇಲೆ ಭಾರಿ ಒತ್ತಡ ಉಂಟಾಗುವುದು. ಹಾಗಾಗಿ ನಿಂತುಕೊಳ್ಳುವಾಗ, ಕುಳಿತುಕೊಳ್ಳುವಾಗ, ಮಲಗುವಾಗ ಹಾಗೂ ದೀರ್ಘ ಸಮಯದ ಕೆಲಸ ಕೈಗೊಂಡಾಗ ಸೂಕ್ತವಾದ ಭಂಗಿಯನ್ನು ಅನುಸರಿಸುವುದರ ಮೂಲಕ ನೋವನ್ನು ನಿಯಂತ್ರಿಸಬಹುದು.
ವ್ಯಾಯಾಮ: ಸೂಕ್ತ ರೀತಿಯ ವ್ಯಾಯಾಮ ಮಾಡುವುದರ ಮೂಲಕ ನೋವನ್ನು ನಿವಾರಣೆ ಮಾಡಬಹುದು ಎಂದು ನಿಮ್ಮ ಭೌತಿಕ ತಜ್ಞರು ಸಲಹೆ ಮಾಡಬಹುದು. ನಿಯಮಿತವಾಗಿ ಕೆಲವು ಸೂಕ್ತ ವ್ಯಾಯಾಮಗಳನ್ನು ಮಾಡುವುದರ ಮೂಲಕ ನೋವನ್ನು ನಿಯಂತ್ರಣದಲ್ಲಿ ಇಡಬಹುದು.
ಯೋಗ ಮತ್ತು ಧ್ಯಾನ: ಮಾನಸಿಕ ಹಾಗೂ ದೈಹಿಕ ನೋವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಯೋಗ ಮತ್ತು ಧ್ಯಾನ. ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಈ ಚಿಕಿತ್ಸಕ ವಿಧಾನವನ್ನು ಗಣನೀಯವಾಗಿ ಅನುಸರಿಸುವುದರಿಂದ ಬೆನ್ನುನೋವನ್ನು ಸುಲಭವಾಗಿ ನಿವಾರಿಸಬಹುದು.
ಪೌಷ್ಟಿಕ ಆಹಾರದ ಸೇವನೆ: ಮೂಳೆ ಮುರಿತ, ಸಂಧಿ ನೋವು, ಬೆನ್ನು ನೋವು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರವು ಸಹ ಗಂಭೀರವಾದ ಪರಿಣಾಮವನ್ನು ಬೀರುವುದು. ಹಾಗಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಅದಕ್ಕಾಗಿ ಹಸಿರು ಸೊಪ್ಪುಗಳು, ಚೀಸ್, ಮೊಸರು, ಮೊಟ್ಟೆ, ಕಿತ್ತಳೆ, ಸೋಯಾ ಹಾಲು, ಮೀನು ಸೇರಿದಂತೆ ಇನ್ನಿತರ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ಶುಂಠಿಯು ಸಹಾಯ ಮಾಡುವುದು: ಶುಂಠಿಯು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ನೈಸರ್ಗಿಕ ಔಷಧೀಯ ಮೂಲ. ಇದನ್ನು ಗಣನೀಯವಾಗಿ ಬಳಕೆ ಮಾಡುವುದರಿಂದ ಬೆನ್ನು ನೋವನ್ನು ನಿವಾರಿಸಬಹುದು. ಶುಂಠಿಯ ಚೂರನ್ನು ನೀರಿಗೆ ಸೇರಿಸಿ, 30 ನಿಮಿಷಗಳ ಕಾಲ ಕುದಿಸಿ. ಬಳಿಕ ಸೋಸಿ ತಣಿಯಲು ಬಿಡಿ. ನಂತರ ಸೇವಿಸುವುದು ಸೂಕ್ತ.
ಸಾಮಾನ್ಯ ಕಾರಣಗಳಿಂದ ಕಾಣಿಸಿಕೊಳ್ಳುವ ಬೆನ್ನುನೋವಿಗೆ ಮನೆಯಲ್ಲಿಯೇ ಸೂಕ್ತ ಆರೈಕೆ ಮಾಡುವುದರ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದು. ಸ್ವಯಂ ಆರೈಕೆಯ ಬಳಿಕವೂ ನೋವು ಉಲ್ಭಣಗೊಳ್ಳುತ್ತಿದೆ ಅಥವಾ ಕಡಿಮೆಯಾಗುತ್ತಿಲ್ಲ ಎಂದಾಗ ವೈದ್ಯರಲ್ಲಿ ಸೂಕ್ತ ತಪಾಸಣೆ ಮಾಡಿಸುವುದು ಅಥವಾ ಚಿಕಿತ್ಸೆ ಪಡೆದುಕೊಳ್ಳುವುದನ್ನು ಮರೆಯಬಾರದು.