ಬೆನಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ತಿ.ನರಸೀಪುರ.ನ.04: ಹಾಲು ಉತ್ಪಾದಕರು ಸಂಘಕ್ಕೆ ಉತ್ತಮ ಗುಣ ಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಬೆನಕನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘವನ್ನು ತಾಲೂಕಿನಲ್ಲಿಯೇ ಮಾದರಿ ಸಂಘ ಮಾಡಲು ಕಾರಣ ಕರ್ತರಾಗಿದ್ದಾರೆ ಎಂದು ಮೈಮುಲ್‍ನ ಮಾರ್ಗ ವಿಸ್ತರಣಾಧಿಕಾರಿ ಪ್ರಮೋದ್ ಪ್ರಶಂಸೆ ವ್ಯಕ್ತ ಪಡಿಸಿದರು.
ತಾಲೂಕಿನ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ 2019-20 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬೆನಕನಹಳ್ಳಿ ಗ್ರಾಮದ ಸಹಕಾರ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಹಾಲು ಉತ್ಪಾದಕರು ನಿರಂತರ ಪರಿಶ್ರಮ ವಹಿಸಿ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುತ್ತಿರುವುದರಿಂದ ಸಂಘವು ತಾಲೂಕಿನಲ್ಲಿಯೇ ನಂ.1 ಸ್ಥಾನ ಪಡೆದು ಕೊಂಡಿದೆ ಎಂದರು .
ಸಹಕಾರ ಸಂಘದಲ್ಲಿ ನಡೆಯುವ ಸಭೆಗಳಲ್ಲಿ ಸದಸ್ಯರು ಪ್ರಶ್ನೆ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟ ಅವರು ಸಂಘದ ಆಡಳಿತ ಪಾರದರ್ಶಕ ವಾಗಿರಲು ಸದಸ್ಯರ ಕೊಡುಗೆಯೂ ಮುಖ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಇತ್ತೀಚಿನ ದಿನಗಳಲ್ಲಿ ಹಸುಗಳಲ್ಲಿ ಕಾಲು ಬಾಯಿ ಜ್ವರ ಕಾಣಿಸಿಕೊಂಡಿದ್ದು ಎಲ್ಲರೂ ಕಡ್ಡಾಯವಾಗಿ ಹಸುಗಳಿಗೆ ಲಸಿಕೆ ಹಾಕಿಸಬೇಕು.ಪ್ರತಿ ಹಸುಗಳಿಗೂ ಲಸಿಕೆ ಹಾಕಿಸಿದಾಗ ಮಾತ್ರವೇ ಕಾಲು ಬಾಯಿ ಜ್ವರ ತಪ್ಪಿಸಬಹುದಾಗಿದ್ದು, ಹಸು ಹಾಲು ಕೊಡಲಿ,ಕೊಡದಿರಲಿ ಎಲ್ಲ ಹಸುಗಳಿಗೂ ಉದಾಸೀನ ಮಾಡದೇ ಲಸಿಕೆ ಹಾಕಿಸಿ ಎಂದು ಸಲಹೆ ನೀಡಿದರು.ಇದಲ್ಲದೇ ಹಸುಗಳ ಕೊಟ್ಟಿಗೆ ಶುಚಿತ್ವ ಇಲ್ಲದಿದ್ದಲ್ಲಿ ಕೆಚ್ಚಲು ಬಾವು ಎಂಬ ಕಾಯಿಲೆ ಹರಡಲಿದ್ದು ಶುಚಿತ್ವಕ್ಕೆ ಆದ್ಯತೆ ನೀಡಬೇಕು.ಕೊಟ್ಟಿಗೆಗೆ ರಬ್ಬರ್ ಮ್ಯಾಟ್ ಹಾಕಿದರೆ ಹಸುಗಳನ್ನು ಈ ಕಾಯಿಲೆಯಿಂದ ಪಾರು ಮಾಡಲು ಸಾಧ್ಯ ಎಂದು ತಿಳಿಸಿದರು. ಪ್ರತಿಯೊಬ್ಬರೂ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸುವ ಮೂಲಕ ಅವಘಡ ಸಂಭವಿಸಿದಾಗ ಪರಿಹಾರ ಪಡೆಯಬಹುದಾಗಿದೆ.ಒಕ್ಕೂಟವು ಶೇ.75 ರಷ್ಟು ಹಣವನ್ನು ಇನ್ಸೂರೆನ್ಸ್ ಗೆ ನೀಡಲಿದ್ದು ಶೇ.25 ರಷ್ಟು ಹಣ ವನ್ನು ಮಾತ್ರ ಹಸುವಿನ ಮಾಲೀಕರು ನೀಡಬೇಕಾಗಿರುತ್ತದೆ.ಇನ್ಷೂರೆನ್ಸ್ ಅವಧಿ ಮೂರು ವರ್ಷಗಳಾಗಿದ್ದು ಆ ಅವಧಿ ಒಳಗೆ ಹಸುಗಳು ಅಸು ನೀಗಿದರೆ ಡಾಕ್ಟರ್ ವರದಿ ಆಧರಿಸಿ ಪರಿಹಾರ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಸುವಿನ ದೇಹದಲ್ಲಿರುವ ಜಂತು ಹುಳುವಿನಿಂದ ಹಸುಗಳಿಗೆ ಹಲವಾರು ಕಾಯಿಲೆಗಳು ಬರಲಿದ್ದು ಹಾಲಿನ ಗುಣಮಟ್ಟ ಹಾಗು ಶೇಖರಣೆ ಮೇಲೆ ಪರಿಣಾಮ ಬೀರುವುದರಿಂದ ಹಸುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳು ಮಾತ್ರೆಯನ್ನು ಕಡ್ಡಾಯವಾಗಿ ಕೊಡಿಸುವಂತೆ ಅವರು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಜೆ.ಎಸ್.ಮಂಜುನಾಥ್ ಮಾತನಾಡಿ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಹೈನು ಗಾರಿಕೆಯನ್ನು ಉಪ ಕಸುಬು ಮಾಡಿಕೊಂಡು ಹಾಲು ಉತ್ಪಾದನೆ ಹೆಚ್ಚಿಸಿ ಆರ್ಥಿಕವಾಗಿ ಸಧೃಡರಾಗ ಬೇಕು.ಹೈನು ಗಾರಿಕೆ ಉತ್ಪಾದಕರಿಗೆ ಹೆಚ್ಚಿನ ಲಾಭಾಂಶ ನೀಡುವುದರಿಂದ ಗ್ರಾಮದ ಪ್ರತಿ ಮನೆಯಲ್ಲಿಯೂ ಹೈನುಗಾರಿಕೆಗೆ ಪೆÇ್ರೀತ್ಸಾಹ ನೀಡಬೇಕು. ಡೈರಿಗೆ ಹಾಲು ಸರಬರಾಜು ಮಾಡುತ್ತಿರುವ ಉತ್ಪಾದಕರಿಗೆ ಪ್ರತಿ ಲೀಟರ್ ಗೆ 24 ರೂ.ಗಳನ್ನು ನೀಡಲಾಗುತ್ತಿದ್ದು,ಸಹಕಾರ ಸಂಘಕ್ಕೆ ಬರುವ ಲಾಭಾಂಶದಲ್ಲಿ ಸದಸ್ಯರಿಗೆ ಬೋನಸ್ ಹಣ,ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸಹಕಾರ ಸಂಘದ ವತಿಯಿಂದಲೇ ದೊಡ್ಡ ಬಳ್ಳಾಪುರ,ಕೋಲಾರ ಮಾದರಿಯಲ್ಲಿ ಪಶು ಆಹಾರಗಳಾದ ಹಿಂಡಿ.ಬೂಸ ಮಾರಾಟ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಬ್ಯಾಂಕ್ ಸೇವೆಯನ್ನು ಕಲ್ಪಿಸಲು ಸಂಘದ ಕಟ್ಟಡದಲ್ಲಿ ಮೊದಲ ಮಹಡಿ ನಿರ್ಮಾಣ ಮಾಡಲು ಸಿದ್ದರಿದ್ದೇವೆ. ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಸಹಕಾರಿ ಬ್ಯಾಂಕ್ ತೆರೆಯಲು ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದರು.
ಪಶುವೈದ್ಯಕೀಯ ಆಸ್ಪತ್ರೆ ದೊರೆಯುವವರೆಗೂ ಮೈಮುಲ್ ಕಲ್ಪಿಸಿರುವ ಪಶುವೈದ್ಯರ ಸೇವೆಯನ್ನು ಹಾಲು ಉತ್ಪಾದಕ ರೈತರು ಬಳಸಿಕೊಳ್ಳಬೇಕು. ಹಾರ್ದಿಕವಾಗಿ ಹೊರೆಯಾಗುವ ಖಾಸಗಿ ವೈದ್ಯರ ಮೊರೆ ಹೋಗಬಾರದು. ಮೈಮುಲ್ ಪಶು ವೈದ್ಯರ ಸೇವೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಸಂಘಕ್ಕೆ ಲಿಖಿತವಾಗಿ ಅಥವಾ ಮೌಖಿಕವಾಗಿ ಯಾದರೂ ದೂರು ನೀಡಬೇಕು. ಅಧ್ಯಕ್ಷರಾಗುವ ಮೊದಲು ಗ್ರಾಮಕ್ಕೆ ವೈಯಕ್ತಿಕವಾಗಿ ನೀಡಿದ್ದ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ತಿಳಿಸಿದರು.
ಅಲ್ಲದೇ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 2 ಸಾವಿರ ರಬ್ಬರ್ ಮ್ಯಾಟ್‍ಗಳನ್ನು ಕೊಡಿಸಲು ಕೋರಲಾಗಿದೆ.ಅಲ್ಲದೇ ಹಾಲು ಕರೆಯುವ ಯಂತ್ರ,ಮೇವು ಕತ್ತರಿಸುವ ಯಂತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು ಬೇಡಿಕೆ ಅನುಸಾರ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುವುದು.ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಉತ್ಪಾದಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಅವರು ತಿಳಿಸಿದರು.
ಸಂಘದ ಮುಖ್ಯ ನಿರ್ವಹಣಾಧಿಕಾರಿ ಜಿ.ಮಾದಪ್ಪ ಸಂಘದ ಆಡಿಟ್ ವರದಿ ಮಂಡಿಸಿ 2019-20ನೇ ಸಾಲಿನಲ್ಲಿ ಸಂಘವು 4 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ದೇ ವೇಳೆ ಸಹಕಾರ ಸಂಘಕ್ಕೆ ಅತಿ ಹಾಲು ಸರಬರಾಜು ಮಾಡಿದ ಜೆ.ಎಸ್.ಮಂಜುನಾಥ್, ಬಿ.ಜಿ.ರಮೇಶನ್,ಬಿ.ಎಂ.ಸಿದ್ದ ಮಲ್ಲಿಕಾರ್ಜುನ ಸ್ವಾಮಿ,ಹಾಗು ಸೋಮಣ್ಣ ರವರನ್ನು ಸನ್ಮಾನಿಸಲಾಯಿತು
ಸಂಘದ ಉಪಾಧ್ಯಕ್ಷ ಬಿ.ಜಿ.ರಮೇಶನ್,ನಿರ್ದೇಶಕರುಗಳಾದ ಬಿ.ಎಂ.ಬಸವಣ್ಣ,ಬಿ.ಎಂ.ಮಹದೇವಸ್ವಾಮಿ,ಸಿದ್ದಪ್ಪ,ಬಿ.ಎಸ್.ಬಸಪ್ಪ,ಶಿವಪಾದ,ರಾಜಶೆಟ್ಟಿ,ಶಿವಮ್ಮ,ಪ್ರೇಮ,ಶಿವಮ್ಮ,ಹಾಲು ಪರೀಕ್ಷಕ ಬಿ.ಪಿ.ಮಹೇಶ್, ಎ.ಐ.ಕಾರ್ಯಕರ್ತ ಬಿ.ಎಂ.ಮಹದೇವಸ್ವಾಮಿ,.ಬಿ.ಎನ್.ಮಹೇಶ,ಹೂವಮ್ಮ ಮತ್ತಿತರರಿದ್ದರು.