ಬೆದರಿಸಿ ಸುಲಿಗೆ ಆರೋಪಿ ಸೆರೆ

ಬೆಂಗಳೂರು,ಜು.೩- ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿಗೆ ತೆರಳಿ ಮಾಲಕನಿಗೆ ಚಾಕು ತೋರಿಸಿ ೮ ಸಾವಿರ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆಯ ಅಯಾಜ್ ಚೌಧರಿ (೪೩) ಬಂಧಿತ ಆರೋಪಿಯಾಗಿದ್ದು,ಆತನಿಂದ ೧.೪೦ ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಕಳೆದ ಜೂ.೨೧ರಂದು ‘ಬಾಲಾಜಿ ಹೊಸೈರಿ’ ಬಟ್ಟೆಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅಯಾಜ್ ಚೌಧರಿ ಮತ್ತು ಸದ್ದಾಂ ಖಾನ್ ಗಲ್ಲಾ ಪೆಟ್ಟಿಗೆಯಲ್ಲಿದ್ದ ೮ ಸಾವಿರ ಎಗರಿಸಲು ಮುಂದಾದಾಗ ಅಂಗಡಿ ಮಾಲಿಕ ಪ್ರತಿರೋಧ ತೋರಿದ್ದು, ಚಾಕು ತೋರಿಸಿ ಬೆದರಿಸಿದ್ದರು.
ಬಳಿಕ ಹಣದೊಂದಿಗೆ ಪರಾರಿಯಾಗುವಾಗ ಸ್ಥಳೀಯರು ಬೆನ್ನಟ್ಟಿ ಆರೋಪಿ ಸದ್ದಾಂ ಖಾನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಂದು ತಪ್ಪಿಸಿಕೊಂಡಿದ್ದ ಮತ್ತೊಬ್ಬ ಆರೋಪಿ ಅಯಾಜ್ ಚೌಧರಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇವರ ವಿರುದ್ಧ ಸಿಟಿ ಮಾರ್ಕೆಟ್, ಸಿ.ಕೆ.ಅಚ್ಚುಕಟ್ಟು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದ ಬಳಿಕವೂ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.