ಬೆದರಿಕೆ ಹಿಂದೆ ಉಗ್ರರ ಕೈವಾಡ ಶಂಕೆ

ಬೆಂಗಳೂರು, ಡಿ. ೧- ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹಿಂದೆ ಉಗ್ರರ ಕೈವಾಡ ಇರುವ ಅನುಮಾನಗಳು ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬಾಂಬ್ ಬೆದರಿಕೆ ಕರೆ ಬಂದಿರುವ ಬೆಂಗಳೂರಿನ ಬಸವೇಶ್ವರ ನಗರದ ನ್ಯಾಪೆಲ್ ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಬೆದರಿಕೆಯ ಇ-ಮೇಲ್‌ನಲ್ಲಿ ಅಲ್ಲಾಗೆ ಮೋಸ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ಗಮನಿಸಿದರೆ ಬಾಂಬ್ ಬೆದರಿಕೆ ಹಿಂದೆ ದೊಡ್ಡ ಜಾಲ ಇರಬಹುದು. ಉಗ್ರರ ಕೈವಾಡವಿರುವ ಶಂಕೆಯೂ ಇದೆ ಎಂದರು.
ಬಾಂಬ್ ಬೆದರಿಕೆಯ ಇ-ಮೇಲ್ ಪತ್ರವನ್ನು ನೋಡಿದರೆ ಹೈಲೆವರ್ ಟೆರರಿಸ್ಟ್ ತರ ಕಾಣುತ್ತೆ. ಅಲ್ಲಾಗೆ ತೊಂದರೆ ಮಾಡುತ್ತಿದ್ದೀರಿ, ಮುಂಬೈನಲ್ಲಿ ಗಲಾಟೆ ಮಾಡುತ್ತಿದ್ದೀರಿ, ಹೀಗೆಲ್ಲಾ ಧರ್ಮಾಧಾರಿತ ಸಂದೇಶಗಳಿವೆ ಎಂದು ಅವರು ಹೇಳಿ, ಬಾಂಬ್ ಬೆದರಿಕೆಯೊಡ್ಡಿರುವವರ ವಿರುದ್ಧ ಮುಲಾಜಿಲ್ಲದ ಕ್ರಮ ಕೈಗೊಳ್ಳಬೇಕು. ಮಕ್ಕಳ ಪೋಷಕರಿಗೆ ಆತಂಕ ಶುರುವಾಗಿದೆ ಎಂದು ಅವರು ಹೇಳಿದರು.