ಬೆಣ್ಣೆ ನಗರಿಯಲ್ಲಿ ಲಿಂಗಾಯತರ ಬಲ ಪ್ರದರ್ಶನ

೨೪ನೇ ಮಹಾಧಿವೇಶನ

ದಾವಣಗೆರೆ, ಡಿ.೨೩; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ೨೪ನೇ ಮಹಾ ಅಧಿವೇಶನಕ್ಕೆ ನಾಡಿನ ಎಲ್ಲಾ ದಿಕ್ಕುಗಳಿಂದಲೂ ವೀರಶೈವ ಲಿಂಗಾಯತ ಸಮಾಜಬಾಂಧವರು ಆಗಮಿಸಿದ್ದಾರೆ.
ದಾವಣಗೆರೆ ಎಲ್ಲಾ ಅಧಿವೇಶನಗಳಿಗೆ ಅದೃಷ್ಟದ ಊರಾಗಿದ್ದು, ಯಾವುದೇ ರಾಜಕೀಯ ಆಟಗಳು ಮೊದಲು ಇಲ್ಲೇ ಪ್ರಾರಂಭವಾಗಲಿದೆ. ಇನ್ನು ಪ್ರಮುಖ ರಾಜಕಾರಣಿಗಳು ದಾವಣಗೆರೆಗೆ ಬಂದಿದ್ದು, ಶ್ರೀಗಳ ಪೋಟೋಗಳಿಗಿಂತ ರಾಜಕೀಯ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಒಟ್ಟಾರೆ ದೇವನಗರಿಯಲ್ಲಿ ಲಿಂಗಾಯಿತರ ಶಕ್ತಿ ಪ್ರದರ್ಶನ ನಡೆಯಲಿದ್ದು, ಎಲ್ಲರ ಚಿತ್ತ ಬೆಣ್ಣೆನಗರಿ ದಾವಣಗೆರೆಯತ್ತ ನೆಟ್ಟಿದೆ.ಇಲ್ಲಿನ ಬಾಪೂಜಿ ಎಂಬಿಎ ಮೈದಾನದಲ್ಲಿ ಕಳೆದ ೮-೧೦ ದಿನಗಳಿಂದಲೂ ಮಹಾ ಅಧಿವೇಶನಕ್ಕೆ, ಸ್ವತಃ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ, ಉಪಾಧ್ಯಕ್ಷರಾದ ಎಸ್.ಎಸ್.ಗಣೇಶ, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ ಹೀಗೆ ಹಿರಿಯರಿಂದ ಕಿರಿಯವರೆಗೆ ಎಲ್ಲರೂ ಐತಿಹಾಸಿಕ ಮಹಾ ಅಧಿವೇಶನ ಸಾಕಾರಗೊಳಿಸಿದ್ದಾರೆ.ನಾಲ್ಕು ದಶಕದ ನಂತರ ದಾವಣಗೆರೆಗೆ ಒಲಿದು ಬಂದ ೨೪ನೇ ಮಹಾಧಿವೇಶನಕ್ಕೆ ಸುಮಾರು ೨ ಲಕ್ಷಕ್ಕೂ ಅಧಿಕ ಸಮಾಜ ಬಾಂಧವರನ್ನು ಆಗಮಿಸಿದ್ದಾರೆ.
೧೬೦-೩೦೦ ಅಡಿ ಉದ್ದ-ಅಗಲದ ವಿಶಾಲ ಪೆಂಡಾಲ್ ನಿರ್ಮಿಸಲಾಗಿದ್ದು ೧೦೦ ಅಡಿ ಉದ್ದ, ೪೦ ಅಡಿ ಅಗಲದ ವಿಶಾಲ ವೇದಿಕೆಯಲ್ಲಿ ಸಮಾರಂಭದ ಉದ್ಘಾಟನೆ ನಡೆಯಿತು. ಈ ವಿಶಾಲ ವೇದಿಕೆಯಲ್ಲಿ ಮೂರು ಭಾಗವಿದ್ದು, ಮಧ್ಯದಲ್ಲಿ ಸಮಾಜದ ಮಠಾಧೀಶರು, ಸಮಾಜದ ನಾಯಕರಿಗಾಗಿ ೪೫ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ತಲಾ ೨೦ ಆಸನಗಳ ವ್ಯವಸ್ಥೆ ಇದ್ದು, ಅತಿಥಿ, ಗಣ್ಯರು ಅಲ್ಲಿ ಆಸೀನರಾಗಿದ್ದರು. ವಿಶಾಲ ಪೆಂಡಾಲ್‌ನಲ್ಲಿ ಸುಮಾರು ೩೦ ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ವೇದಿಕೆ, ಪೆಂಡಾಲ್ ಕಡೆ ಕೃಷಿ ಪುಸ್ತಕ, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಗಮನಸೆಳೆದಿದೆ. ಇದಕ್ಕಾಗಿ ಸಂಘಟಕರು ೫೦-೬೦ ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯದ ವಿವಿಧೆಡೆಯಿಂದ ಬಸ್ಸು, ಮಿನಿ ಬಸ್ಸು, ಟಿಟಿ, ಟ್ರ್ಯಾಕ್ಸ್, ಕಾರು, ಜೀಪುಗಳು ಸೇರಿದಂತೆ ಸಾವಿರಾರು ವಾಹನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಆಗಮಿಸಿದ್ದಾರೆ.ಅಲ್ಲದೇ ಎರಡು ದಿನ ಮಹಾ ಅಧಿವೇಶನಕ್ಕಾಗಿ ಅತಿಥಿ, ಗಣ್ಯರು, ಸಮಾಜ ಬಾಂಧವರಿಗೆ ತಂಗಲು, ವ್ಯವಸ್ಥೆ ಮಾಡಲಾಗಿದೆ. ಶಾಲೆ, ಕಾಲೇಜು, ಹಾಸ್ಟೆಲ್‌ಗಳು, ಲಾಡ್ಜ್‌ಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ, ಪರ ರಾಜ್ಯಗಳಿಂದಲೂ ಸಮಾಜದ ಮಠಾಧೀಶರು ಆಗಮಿಸಲಿದ್ದು, ಗುರುಗಳ ದೈನಂದಿನ ಪೂಜಾ, ಧಾರ್ಮಿಕ ಆಚರಣೆಗೆ ಯಾವುದೇ ತೊಂದರೆ.
ಆಗದಂತೆ ಭಕ್ತಾದಿಗಳ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಕೆಲವು ಮಠಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ.ಹಿರಿಯರ ಮಾರ್ಗದರ್ಶನ, ಕಿರಿಯರ ಉತ್ಸಾಹದೊಂದಿಗೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತರ ಮಹಾ ಅಧಿವೇಶನವು ಇಡೀ ರಾಜ್ಯ, ರಾಷ್ಟ್ರದ ಗಮನ ಸೆಳೆಯುತ್ತಿದೆ.
ಕರ್ನಾಟಕದ ವಿವಿಧ ಜಿಲ್ಲೆ, ಅನ್ಯ ರಾಜ್ಯಗಳು, ವಿದೇಶಗಳಿಂದಲೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರ ದಾಸೋಹ

ಊಟೋಪಚಾರಕ್ಕೆ ಯಾವುದೇ ತೊಂದರೆಯಾಗದಂತೆ ದಾವಣಗೆರೆಯ ಬಾಂಧವರು ಅತಿಥಿ ದೇವೋಭವ ಎಂಬಂತೆ ಆತಿಥ್ಯ ನೀಡಿದೆ ಸಮಾಜ ಬಾಂಧವರಿಗೆ ಇಂದು ಬೆಳಿಗ್ಗೆ ಕೇಸರಿಬಾತ್-ಉಪ್ಪಿಟ್ಟು, ಟೀ, ಕಾಫಿ, ಹಾಲು, ಮಧ್ಯಾಹ್ನ ಜೋಳದ ರೊಟ್ಟಿ, ಮುಳುಗಾಯಿ ಪಲ್ಯ, ಗೋಧಿ ಹುಗ್ಗಿ, ಲಾಡು, ಅನ್ನ, ಸಾರು ಮಾಡಲಾಗಿದೆ. ರಾತ್ರಿಗೆ ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ ವ್ಯವಸ್ಥೆ ಇದೆ. ಡಿ.೨೪ ಬೆಳಿಗ್ಗೆ ತಿಂಡಿಗೆ ದಾವಣಗೆರೆಯ ಪ್ರಸಿದ್ಧ ಮಂಡಕ್ಕಿ ಉಸುಳಿ, ಮೆಣಸಿನಕಾಯಿ, ಪೊಂಗಲ್, ಚಿತ್ರಾನ್ನ, ಮಧ್ಯಾಹ್ನ ಶ್ಯಾವಿಗೆ ಪಾಯಸ, ಪಲಾವ್, ಮೊಸರು ಬಜ್ಜಿ, ಅನ್ನ ಸಾರು, ರಾತ್ರಿಗೆ ಊಟಕ್ಕೆ ಅನ್ನ ಸಾಂಬಾರು ಮಾಡಲಾಗುತ್ತಿದೆ.
ಮಹಾಧಿವೇಶನದ ಎರಡೂ ದಿನ ಬೆಳಿಗ್ಗೆ ೮ರಿಂದ ರಾತ್ರಿ ೧೦ರವರೆಗೆ ನಿರಂತರ ಅನ್ನ ದಾಸೋಹಕ್ಕೆ ನಡೆಯುತ್ತಿದೆ