ಬೆಣ್ಣೆಹಳ್ಳಕ್ಕೆ ಶಾಶ್ವತ ಪರಿಹಾರ ಒದಗಿಸಲು ಒತ್ತಾಯ

ಹುಬ್ಬಳ್ಳಿ,ಸೆ9: ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದು, ಪ್ರತಿವರ್ಷ ಬೆಣ್ಣೆಹಳ್ಳ ಮತ್ತು ರಾಡಿಹಳ್ಳ ಪ್ರವಾಹದಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಕೂಡಲೇ ಬೆಣ್ಣೆಹಳ್ಳಕ್ಕೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಬೆಣ್ಣೆಹಳ್ಳ ಸಂರಕ್ಷಣಾ ಸಮಿತಿ ಮತ್ತು ರಾಡಿಹಳ್ಳ ಸಂರಕ್ಷಣಾ ಸಮಿತಿ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿತು.
ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯಲ್ಲಿ ಬೆಣ್ಣೆಹಳ್ಳದ ಸಂರಕ್ಷಣಾ ಸಮಿತಿ ಅಧ್ಯಕ್ಷ ಕಿರಣ ರೆಡ್ಡೆರ್ ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ಬೆಣ್ಣೆ ಹಳ್ಳ, ರಾಡಿಹಳ್ಳದ ಸಮಸ್ಯೆ ವಿಪರೀತವಾಗುತ್ತಿದ್ದು, ಇದರಿಂದ ಜನತೆಗೆ ಅಪಾರ ಹಾನಿಯನ್ನುಂಟು ಮಾಡುತ್ತಿದೆ. ರೈತರ ಬೆಳೆ ಹಾನಿ, ಕೃಷಿ ಭೂಮಿಯ ಸವಕಳಿ ಹಾಗೂ ಮನೆಗಳಿಗೆ ಹಾನಿಯಾಗಿವೆ. ಇಷ್ಟಾದರೂ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಜನರ ಸ್ಪಂದನೆಗೆ ಸ್ಪಂದಿಸಲು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಬೆಣ್ಣೆ ಹಳ್ಳ ಮತ್ತು ರಾಡಿಹಳ್ಳ ಅಗಲೀಕರಣ ಮಾಡುವುದು, ಹೂಳೆತ್ತುವುದು, ಒತ್ತುವರಿ ಆದಲ್ಲಿ ತೆರವುಗೊಳಿಸಿ ಚೆಕ್ ಡ್ಯಾಮ ನಿರ್ಮಿಸುವುದು, ಹಳ್ಳ ಅಗಲೀಕರಣ ಆಗುವರೆಗೆ ಪ್ರತಿವರ್ಷ ವಿದರ್ಭ ಮಾದರಿ ಪ್ಯಾಕೇಜ್ ನ್ನು ಅಕ್ಕಪಕ್ಕದ ಹಾನಿಯಾದ ರೈತರ ಜಮೀನುಗಳಿಗೆ ನೀಡುವುದು, ಬೆಣ್ಣೆಹಳ್ಳ ಅಭಿವೃದ್ಧಿ ದೃಷ್ಟಿಯಿಂದ ರೈತರ ಭೂಮಿ ಖರೀದಿ ಮಾಡುವುದು, ಹಳ್ಳದ ಪ್ರವಾಹದಿಂದ ಗ್ರಾಮಗಳಲ್ಲಿ ಹಾನಿಯಾದ ಮನೆಗಳಿಗೆ ಎನ್‍ಡಿಆರ್‍ಎಫ್ ಅನುದಾನದಲ್ಲಿ ಪ್ರತಿ ಮನೆಗೆ ಐದು ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ತಾಜುದ್ದೀನ ಮುಲ್ಲಾನವರ, ಸಹ ಕಾರ್ಯದರ್ಶಿ ಶಿವಾನಂದಯ್ಯ ಹೊಸಮಠ, ನಿರ್ದೇಶಕ ಪ್ರದೀಪ್ ಲೆಂಕಿನಗೌಡ್ರ, ನಾಗಪ್ಪ ಅರಳಿಕಟ್ಟಿ, ಸಯ್ಯದಲಿ ಬಾವಾಸಾಬ ಹುಲಿ, ಸದಸ್ಯರಾದ ಜಗದೀಶದೊಡ್ಡ ಗಾಣಿಗೇರ್ ಸೇರಿದಂತೆ ಮುಂತಾದವರು ಇದ್ದರು.