ಬೆಣ್ಣೆನಗರಕ್ಕೆ ಹರಿದು ಬಂದ ಜನಸ್ತೋಮ ಟ್ರಾಫಿಕ್ ಜಾಮ್

ಸಿದ್ದರಾiಯ್ಯನವರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು.

ದಾವಣಗೆರೆ, ಆ. ೩- ದಾವಣಗೆರೆಯಲ್ಲಿ ಇಂದು ಆಯೋಜಿಸಲಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ೭೫ನೇ ಅಮೃತ ಮಹೋತ್ಸವ ಸಮಾರಂಭಕ್ಕೆ ಕಂಡು ಕೇಳರಿಯದ ರೀತಿಯಲ್ಲಿ ಜನಸಾಗರವೇ ಹರಿದು ಬಂದಿದೆ.
ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ, ರೈಲುಗಳಲ್ಲಿ ಜನಸ್ತೋಮವೇ ಕಂಡು ಬಂದಿದ್ದು, ತಮ್ಮ ನೆಚ್ಚಿನ ನಾಯಕ ೭೫ನೇ ಹುಟ್ಟುಹಬ್ಬವನ್ನು ಕಣ್ತುಂಬಿಕೊಳ್ಳಲು ದಾವಣಗೆರೆಗೆ ಲಗ್ಗೆ ಹಾಕಿದ್ದಾರೆ.
ರಾಜ್ಯದ ವಿವಿಧೆಡೆಯಿಂದ ೭ ಸಾವಿರ ಸ್‌ಗಳಲ್ಲಿ ಜನರು ಆಗಮಿಸಿದ್ದು ಲಕ್ಷೆಪ ಲಕ್ಷ ಜನರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜನರು ವಾಹನಗಳಲ್ಲೂ ಆಗಮಿಸುತ್ತಿದ್ದು ಎಲ್ಲಿ ನೋಡಿದರೂ ಕಿಮೀ ಗಟ್ಟಲೆ ವಾಹನಗಳು ಸಾಲುಗಟ್ಟಿರುವ ದೃಶ್ಯ ಕಂಡು ಬಂದಿದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಇತರೆ ಭಾಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಜನರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಯಿತು. ಶಾಮನೂರು ಪ್ಯಾಲೆಸ್ ಮೈದಾನದೊಳಗೆ ಬರಲು ಕಾಂಗ್ರೆಸ್ ನಾಯಕರು ಕೂಡ ಹರಸಾಹಸ ನಡೆಸಬೇಕಾಯಿತು.
ಕಾರ್ಯಕ್ರಮದಲ್ಲಿ ೫ ಲಕ್ಷ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಈಗಾಗಲೇ ಮೈದಾನದಲ್ಲ ಭಾರೀ ಜನಸ್ತೋಮವೇ ಜಮಾಯಿಸಿದೆ. ಕಾರ್ಯಕ್ರಮಕ್ಕೆ ಬರುವ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ, ಬೆಳಗಿನ ಉಪಾಹಾರ ಸಿದ್ಧಪಡಿಸಲಾಗಿದ್ದು ೨ ಸಾವಿರಕ್ಕೂ ಹೆಚ್ಚು ಬಾಣಸಿಗರು, ೬ಲಕ್ಷ ಮೈಸೂರು ಪಾಕ್ ಸಿದ್ಧಪಡಿಸಿಲಾಗಿದೆ.. ಪಲಾವ್ ಮತ್ತು ಮೊಸರನ್ನ ಸಿದ್ಧಪಡಿಸಲಾಗಿದೆ. ೪೦೦ ಕೌಂಟರ್ ಗಳಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
sಸಿದ್ದರಾಮಯ್ಯ ಅವರಿಗೆ ಜಾನಪದ ಕಲಾತಂತ್ರಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಡೋಲು ಕುಣಿತ, ವೀರಗಾಸೆ ಸೇರಿದಂತೆ, ವಿವಿಧ ಬಗೆಯ ಕಲಾತಂಡಗಳು ಮೆರವಣಿಗೆ ಮೂಲಕ ಭರ್ಜರಿ ಸ್ವಾಗತ ನೀಡಲಾಯಿತು. ಎಲ್ಲೆಡೆ ಸಿದ್ದರಾಮಯ್ಯ ಪರ ಘೋಷಣೆಗಳು ಮೊಳಗಿದವು.