ಬೆಡ್- ವೆಂಟಿಲೇಟರ್ ಸಿಗದೇ ಕೊರೋನಾ ಸೋಂಕಿತ ಸಾವು

ಕಲಬುರಗಿ.ಏ.21:ಸುಮಾರು ನಾಲ್ಕು ಗಂಟೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಸಹ ಸರಿಯಾದ ಸಮಯಕ್ಕೆ ಬೆಡ್ ಹಾಗೂ ವೆಂಟಿಲೇಟರ್ ಸಿಗದೇ ಕೊರೋನಾ ಸೋಂಕಿತನೋರ್ವ ಕಾರಿನಲ್ಲಿಯೇ ಪ್ರಾಣ ಬಿಟ್ಟ ದಾರುಣ ಘಟನೆ ನಗರದ ಸತ್ಯ ಆಸ್ಪತ್ರೆ ಎದುರಿಗೆ ವರದಿಯಾಗಿದೆ.
ನಗರದಲ್ಲಿ ಆಕ್ಸಿಜನ್ ಮತ್ತು ಬೆಡ್‍ಗಾಗಿ ರೋಗಿಗಳ ಪರದಾಟ ಮುಂದುವರೆದಿದ್ದು, ವೆಂಟಿಲೇಟರ್ ಮತ್ತು ಬೆಡ್ ಸಿಗದೇ ಕೊರೋನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಯ ಕಾಳಗಿ ಪಟ್ಟಣದ ಶಂಕರ್ (50) ಎಂಬಾತನೇ ಮೃತ ದುರ್ದೈವಿ.
ನಾಲ್ಕು ಗಂಟೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಬೆಡ್ ಹಾಗೂ ವೆಂಟಿಲೇಟರ್ ಸಿಗದ ಕಾರಣ ಕಾರಿನಲ್ಲಿಯೇ ಮೃತಪಟ್ಟಿದ್ದಾರೆ. ಶಂಕರ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವ್ಯವಸ್ಥೆಯ ವಿರುದ್ಧ ಮೃತ ಶಂಕರ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.