ಬೆಡ್ ಬ್ಲಾಕಿಂಗ್ ವಾರ್ ರೂಂ ಉದ್ಯೋಗಿ ಸೇರಿ ಇಬ್ಬರು ಸೆರೆ

ಬೆಂಗಳೂರು, ಮೇ.೨೭- ಕೊರೊನಾ ಸೋಂಕಿತ ರೋಗಿಗಳ ಬೆಡ್ ಬ್ಲಾಕಿಂಗ್ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಸಿಬಿ ಪೊಲೀಸರು ವಾರ್ ರೂಮ್ ಉದ್ಯೋಗಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ದಕ್ಷಿಣ ವಲಯ ವಾರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ವರುಣ್(೨೦) ಹಾಗೂ ಆತನ ಸ್ನೇಹಿತ ಬನಶಂಕರಿ ೩ನೇ ಹಂತದ ಯಶವಂತ(೨೧) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಮ್ ಹೆಲ್ಪ್ ಲೈನ್ ಗೆ ಸಂಪರ್ಕ ಮಾಡಿದವರನ್ನು ಹೆಲ್ಪ್ ಲೈನ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಆರೋಪಿತ ವರುಣ್ ಎಸ್. ಎಂಬಾತ ಸೋಂಕಿತರ ಹಾಗೂ ಅವರ ಸಂಬಂಧಿಕ ಮೊಬೈಲ್ ನಂಬರ್ ಸಂಗ್ರಹಿಸಿ ತನ್ನ ಸ್ನೇಹಿತ ಯಶವಂತ ಕುಮಾರ್ ಎಂಬಾತನಿಗೆ ನೀಡಿ, ಆತನಿಂದ ಸೋಂಕಿತರಿಗೆ ಕರೆ ಮಾಡಿಸಿ ಬೆಡ್ ಬ್ಲಾಕ್ ಮಾಡುವುದಕ್ಕಾಗಿ ಹಣದ ಬೇಡಿಕೆ ಇಡುತ್ತಿದ್ದ. ಕೋವಿಡ್ ರೋಗಿಗಳಿಗೆ ಬೆಡ್ ಕೊಡಿಸುವ ಆಮಿಷ ಒಡ್ಡಿ ಹಣ ಪಡೆಯುವ ಪ್ರಯತ್ನದಲ್ಲಿದ್ದಾಗ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದರು.
ಬೊಮ್ಮನಹಳ್ಳಿ ವಾರ್ ರೂಂ ಸಿಬ್ಬಂದಿಯ ಹೇಳಿಕೆ ಮತ್ತು ರೂಂನಲ್ಲಿದ್ದ ಸಿಸಿ ಟಿವಿ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದರು.
ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಈ ತಿಂಗಳ ಆರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಆರೋಪಿಸಿದ್ದರು. ಇದೀಗ ಅವ್ಯವಹಾರ ಬಿಜೆಪಿ ಶಾಸಕರಿಗೆ ಸುತ್ತಿಕೊಂಡಿದೆ. ಮಾತ್ರವಲ್ಲ ಈ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಸಂಸದ ತೇಜಸ್ವಿ ಸೂರ್ಯ ಪ್ರಯತ್ನಿಸಿ ಟೀಕೆಗೂ ಗುರಿಯಾಗಿದ್ದರು.
ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ.