ಬೆಡ್ ಬ್ಲಾಕಿಂಗ್ ದಂಧೆ ಇಬ್ಬರು ವೈದ್ಯರು ಸೇರಿ 8 ಆರೋಪಿಗಳು ಸಿಸಿಬಿ ವಶ

ಬೆಂಗಳೂರು,ಮೇ.೫-ಬಿಬಿಎಂಪಿಯ ಹಾಸಿಗೆ ಕಾಯ್ದಿರಿಸುವ (ಬೆಡ್ ಬ್ಲಾಕಿಂಗ್) ಪ್ರಕರಣದ ತನಿಖೆಯನ್ನು ಚುರುಕು ಗೊಳಿಸಿರುವ ಸಿಸಿಬಿ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ೮ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಬಿಬಿಎಂಪಿ ಕೋವಿಡ್ ವಾರ್ ರೂಮ್ ಉಸ್ತುವಾರಿ ಡಾ.ರೆಹಾನ್ ಸೇರಿದಂತೆ ೮ ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ನಿನ್ನೆ ರಾತ್ರಿಯೇ ವಾರ್ ರೂಮ್ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.
ಆರೋಪಿಗಳು ಕೊರೊನಾ ಸೋಂಕಿತರಿಗೆ ೩ ಬೆಡ್ ಕೊಡಿಸಿ ೧.೭ ಲಕ್ಷ ಹಣ ವಸೂಲಿ ಮಾಡಿದ್ದ ಖಚಿತ ಮಾಹಿತಿ ಪಡೆದ ಪೊಲಿಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಜಯನಗರ ಪೊಲೀಸ್ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಬೆಡ್ ಬ್ಲಾಕಿಂಗ್ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಕರಣದ ಸಂಬಂಧ ಬಂಧಿತ ಆರೋಪಿಗಳಾದ ನೇತ್ರಾವತಿ(೪೨) ಮತ್ತು ರೋಹಿತ್(೩೨)ಯನ್ನು ವಿಸ್ತೃತ ವಿಚಾರಣೆ ನಡೆಸಲಿದ್ದಾರೆ
ಕೊರೊನಾ ಸೋಂಕಿತರು ಡಿಸ್ಚಾರ್ಜ್ ಆದ ೩೦ ಸೆಕೆಂಡ್‌ನಲ್ಲೇ ಬೆಡ್‌ಗಳು ಬ್ಲಾಕ್ ಆಗುತ್ತಿತ್ತು. ಹೋಂ ಐಸೋಲೇಷನ್‌ನಲ್ಲಿ ಇರುವವರು, ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರ ಹೆಸರಲ್ಲಿ ಬೆಡ್‌ಗಳು ಬ್ಲಾಕ್‌ಗಳು ಆಗುತ್ತಿತ್ತು. ಒಬ್ಬೊಬ್ಬರ ಹೆಸರಲ್ಲಿ ೧೦ ಬೆಡ್‌ಗಳು ಬ್ಲಾಕ್‌ಗಳು ಆಗಿರುವುದು ಕಂಡು ಬಂದಿದೆ.
ನೇತ್ರಾವತಿ ಮತ್ತು ರೋಹಿತ್ ಅವರ ಜೊತೆ ಹಲವರು ಸಂಪರ್ಕದಲ್ಲಿದ್ದು ವಿಚಾರಣೆಯಲ್ಲಿ ಮಾಹಿತಿಯನ್ನು ಪಡೆದು ಅವರ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಂಧಿತ ನೇತ್ರಾವತಿ ಮತ್ತು ರೋಹಿತ್ ಬೇಗೂರಿನವರಾಗಿದ್ದು ಅಕ್ಕಪಕ್ಕದ ನಿವಾಸಿಯಾಗಿದ್ದಾರೆ. ನಾನು ಸಾಮಾಜಿಕ ಕಾರ್ಯಕರ್ತೆ ಎಂದು ಪೊಲೀಸರ ಬಳಿ ನೇತ್ರಾವತಿ ಹೇಳಿದ್ದಾಳೆ.
ಡೀಲ್ ಹೇಗೆ.?
ಕೋವಿಡ್ ಸೋಂಕಿತರಿಗೆ ನೆರವು ನೀಡುವ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಆ ಎಲ್ಲ ಗ್ರೂಪಿನಲ್ಲಿ ನೇತ್ರಾವತಿ ಸದಸ್ಯಳಾಗಿದ್ದಳು. ಗ್ರೂಪಿನಲ್ಲಿ ಹಾಸಿಗೆ ಬೇಕು ಎಂದು ಮನವಿ ಬಂದ ಕೂಡಲೇ ನೇತ್ರಾವತಿ ಅಲರ್ಟ್ ಆಗಿ ಕೂಡಲೇ ಅವರನ್ನು ಸಂಪರ್ಕಿಸುತ್ತಿದ್ದಳು.
ಬಿಬಿಎಂಪಿ ಮತ್ತು ಖಾಸಗಿ ಕೋಟಾದಲ್ಲಿ ಬೆಡ್ ಇದೆ ಎಂದು ಹೇಳಿ ಕೊನೆಗೆ ಬಿಬಿಎಂಪಿ ಬೆಡ್ ಸಿಗುವುದು ಕಷ್ಟ, ಖಾಸಗಿಯಲ್ಲಿ ಬೆಡ್ ಸಿಗುತ್ತದೆ. ಅದಷ್ಟು ಬೇಗ ತಿಳಿಸಬೇಕು. ಇಲ್ಲದಿದ್ದರೆ ಸಿಗುವ ಬೆಡ್ ಸಹ ಫುಲ್ ಆಗುತ್ತದೆ ಎಂದು ಹೆದರಿಸುತ್ತಿದ್ದಳು. ಭಯಗೊಂಡ ರೋಗಿಗಳ ಸಂಬಂಧಿಕರು ಕೊನೆಗೆ ಈಕೆಯ ಖಾತೆಗೆ ಹಣವನ್ನು ಹಾಕುತ್ತಿದ್ದರು.
ನೇತ್ರಾವತಿ ಜಯನಗರದ ಎರಡು ಖಾಸಗಿ ಆಸ್ಪತ್ರೆಯಲ್ಲಿ ೫೦ ಸಾವಿರಕ್ಕೆ ೨ ಬೆಡ್ ಬುಕ್ ಮಾಡಿದ್ದಳು. ಅನುಮಾನಗೊಂಡ ಪೊಲೀಸರು ಸೋಂಕಿತರ ಸಂಬಂಧಿ ನೆಪದಲ್ಲಿ ನೇತ್ರಾವತಿಯನ್ನು ಸಂಪರ್ಕಿಸಿದಾಗ ಸತ್ಯ ಬಯಲಾಗಿದೆ.
ಬಿಬಿಎಂಪಿ ವಾರ್ ರೂಮಿನಲ್ಲಿ ಈಕೆ ಹಲವರ ಜೊತೆ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಇರುವುದು ಮೇಲ್ನೋಟಕ್ಕೆ ಸಿಸಿಬಿ ಗಮನಕ್ಕೆ ಬಂದಿದೆ.
ಬೆಡ್ ಬ್ಲಾಕ್ ಬಹಿರಂಗ ಪಡಿಸಿದ ಸಂಸದ ತೇಜಸ್ವಿ ಸೂರ್ಯ ಇದರಲ್ಲಿ ವಾರ್ ರೂಂ ಸಿಬ್ಬಂದಿ ಮಾತ್ರ ಅಲ್ಲ ಬಿಬಿಎಂಪಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ ಎಂದು ಗಂಭೀರ ನಿನ್ನೆ ಆರೋಪ ಮಾಡಿದ್ದರು.