ಬೆಡ್ ನೀಡದ 66 ಆಸ್ಪತ್ರೆಗಳಿಗೆ ಮತ್ತೆ ನೋಟಿಸ್

ಬೆಂಗಳೂರು, ಏ.21- ರಾಜಧಾನಿ ಬೆಂಗಳೂರು ಕೊರೋನಾ ದ್ವಿಗುಣ ನಡುವೆ ಶೇ.50 ರಷ್ಟು ಹಾಸಿಗೆ ಮೀಸಲಿಡದ ಖಾಸಗಿ 66 ಆಸ್ಪತ್ರೆಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ಬಿಬಿಎಂಪಿ ಬಿಸಿ ಮುಟ್ಟಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಏರಿಕೆಯಾಗುತ್ತಿದ್ದು, ಕೋವಿಡ್ ಸೋಂಕು ಲಕ್ಷಣಗಳಿರುವವರನ್ನು ತ್ವರಿತವಾಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಬೇಕೆಂದು ಸೂಚನೆ ನೀಡಲಾಗಿರುತ್ತದೆ. ಆದರೂ, ಎಚ್ಚತ್ತಿಕೊಳ್ಳದೆ ಇರುವ ಪ್ರತಿಷ್ಠಿತ ಅಪೋಲೋ, ಎಂ.ಎಸ್.ರಾಮಯ್ಯ ಸೇರಿದಂತೆ 66 ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.

ಇನ್ನು, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಇತ್ತೀಚಿಗೆ ಇಲ್ಲಿನ ವಿಕ್ರಂ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ, ಆಸ್ಟರ್ ಸಿಎಂಐ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಸರ್ಕಾರದ ಆದೇಶದಂತೆ ಶೇ. 50 ರಷ್ಟು ಹಾಸಿಗೆ ನೀಡದ ಕಾರಣ ತುರ್ತು ನೋಟೀಸ್ ಜಾರಿಗೊಳಿಸಿದ್ದರು.

ಈ ಕೂಡಲೆ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಇಲ್ಲವಾದರೆ ಕಾಯ್ದೆ ಅನುಸಾರ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು.ಈ ಸಂಬಂಧ ಆಸ್ಪತ್ರೆಗಳು ಮೂಲಕ ಸಮಜಾಯಿಷಿ ನೀಡಿ ಸೂಚನಾ ಪತ್ರದಂತೆ ಹಾಸಿಗೆ ನೀಡಲು ಕ್ರಮವಹಿಸ ಲಾಗುತ್ತಿರುವುದಾಗಿ ಉತ್ತರಿಸಿವೆ.