ಬೆಟ್ಟದ ಮೆಟ್ಟಿಲೇರಿ ನಂದಿನಿ ಉತ್ಪನ್ನ ಅರಿವು

ಸಂಜೆವಾಣಿ ನ್ಯೂಸ್
ಮೈಸೂರು: ಜೂ.17:- ‘ಶುದ್ಧ, ಆರೋಗ್ಯಕರ ನಂದಿನಿ ಪ್ರತಿ ಮನೆಯ ಗೆಳೆಯ’ ‘ನಂದಿನಿ ಹಾಲು ಕೇಳಿ ಪಡೆಯಿರಿ’ ಎಂಬಿತ್ಯಾದಿ ನಾಮಫಲಕ ಹಿಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಚಾಮುಂಡಿ ಬೆಟ್ಟದ ಮೆಟ್ಟಿಲೇರಿ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯ ಅರಿವು ಮೂಡಿಸುವ ವಿಶೇಷ ಪ್ರಯತ್ನವಾಗಿ ಮೈಸೂರು ಜಿಲ್ಲಾ ಉತ್ಪಾದಕರ ಸಹಕಾರ ಸಂಘ ವಿಭಿನ್ನ ಕಾರ್ಯಕ್ರಮ ರೂಪಿಸಿತು. ಮೈಮುಲ್ ಅಧ್ಯಕ್ಷ ಎಂ.ಪ್ರಸನ್ನ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಚಾಮುಂಡಿ ಬೆಟ್ಟದ ಪಾದದಿಂದ ಹೊರಟು ದೇವಾಲಯದವರೆಗೂ ಸಾಗಿದರು. ಈ ವೇಳೆ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪ್ರಸನ್ನ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟವೂ ವರ್ಷಪೂರ್ತಿ ಹಲವು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಜೂ.1ರಂದು ವಿಶ್ಚ ಹಾಲು ದಿನದ ಅಂಗವಾಗಿ ಬೈಕ್ ಜಾಥದ ಮೂಲಕ ಅರಿವು ಮೂಡಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ವಾರಾಂತ್ಯದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲೇರುವ ವಾಯು ವಿಹಾರಿಗಳಿಗೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಮಹಿಳೆಯರಿಗೂ ಹಾಲಿನ ಬಳಕೆಯ ಮೂಲಕ ಅಡುಗೆ ಮಾಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಸಹ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಇತರೆ ಪಾನೀಯ ಉತ್ಪನ್ನಗಳನ್ನು ಬಳಸುವ ಜನತೆ ರೈತರ ಹಿತದೃಷ್ಟಿಯಿಂದ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಈಗಾಗಲೇ ಮೈಮುಲ್ ನಿಂದ ಹೆಚ್ಚಿನ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ನೆರವನ್ನು ರೈತರಿಗೆ ನೀಡಲಾಗುತ್ತಿದೆ. ಹುಲ್ಲಿನ ಕಟ್ಟಿಂಗ್ ಯಂತ್ರ, ನೆಲ ಹಾಸಿಗೆ ಮ್ಯಾಟ್ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ 9 ಲಕ್ಷ ಲೀಟರ್ ಉತ್ಪಾದನಡ ದಾಟಿ ದಾಖಲೆಯ ಪ್ರಮಾಣದ ಉತ್ಪಾದನೆ ಹೆಚ್ಚಾಗಿ ಹೊರ ರಾಜ್ಯಗಳಲ್ಲಿ ಮಾರಾಟಕ್ಕೂ ಅಗತ್ಯ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಸಚ್ಚಿದಾನಂದ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಿ ಜನತೆಯನ್ನು ಆರೋಗ್ಯಯುತವಾಗಿ ಕಾಪಾಡುವುದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯವಾಗಿದೆ. ಇದರ ಭಾಗವಾಗಿ ಉತ್ಕೃಷ್ಟ ಉತ್ಪನ್ನಗಳಾದ ಹಾಲಿನ ಉತ್ಪನ್ನಗಳ ಬಳಕೆ ಅರಿವು ಮೂಡಿಸಲು ವರ್ಷವಿಡೀ ಒಂದಿಲ್ಲೊಂದು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯಕುಮಾರ್ ಒಕ್ಕೂಟದಲ್ಲಿ ಹಾಲಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರೊಟ್ಟಿಗೆ ಅದರ ಮಾರಾಟವು ದೊಡ್ಡ ಸವಾಲಾಗಿದೆ ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ರೂಪಿಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಬೈಕ್ ಜಾಥಾ, ನಂದಿನಿ ಪಾಕ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಬೆಟ್ಟದ ಮೆಟ್ಟಿಲು ಹತ್ತಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದು, ಮುಂದಿನ ದಿನಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಲೋಚಿಸುವ ಚಿಂತನೆಯಿದೆ. ಅಂತೆಯೇ ಮನೆ ಮನೆಗೂ ಅರಿವು ಮೂಡಿಸುವ ಕ್ಯಾಂಪೆನಿಂಗ್ ಸೇರಿ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸದ್ಯ ಒಂಭತ್ತು ಲಕ್ಷಕ್ಕೂ ಹೆಚ್ಚಿನ ಹಾಲು ಮಾರಾಟಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು. ಮಾರುಕಟ್ಟೆ ವ್ಯವಸ್ಥಾಪಕ ಎಚ್.ಕೆ.ಜಯಶಂಕರ್,ಮೈಮುಲ್ ನಿರ್ದೇಶಕರಾದ ಕೆ.ಊಮಾಶಂಕರ್, ಎ.ಟಿ.ಸೋಮಶೇಖರ್, ಸಿ.ಓಂ ಪ್ರಕಾಶ್, ರಾಜ್ ಕುಮಾರ್, ಆಡಳಿತ- ಖರೀದಿ ವ್ಯವಸ್ಥಾಪಕರು ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು.