
ಬೆಂಗಳೂರು, ಏ.೨- ತೀವ್ರ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಇದೀಗ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಚಿಂತನೆ ನಡೆಸಿದೆ. ಎಲ್ಲಾ ರೀತಿಯ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾಗಿರುವ ಪ್ರಾಧಿಕಾರ ಟೋಲ್ ಸಂಗ್ರಹ ದಂಡ ಸಂಗ್ರಹಕ್ಕೆ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ತಂತ್ರಜ್ಞಾನ ಬಳಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಈ ಮಾದರಿಯನ್ನು ನವದೆಹಲಿ -ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಬಳಸುತ್ತಿದೆ. ಕ್ರಮೇಣ ಇತರ ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಸ್ತರಿಸಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲೂ ಈ ತಂತ್ರಜ್ಞಾನ ಅಳವಡಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಈ ತಂತ್ರಜ್ಞಾನದ ಅಡಿಯಲ್ಲಿ ಟೋಲ್ ಶುಲ್ಕವು ಫಾಸ್ಟ್ ಟ್ಯಾಗ್ ಮೂಲಕ ಕಡಿತವಾಗಲಿದೆ. ವಾಹನದ ಪ್ರವೇಶ ಮತ್ತು ನಿರ್ಗಮನದ ವೇಳೆ ಎಎನ್‌ಪಿಆರ್ ಕ್ಯಾಮೆರಾಗಳು ಬಳಕೆಯಾಗಲಿವೆ. ಎನ್‌ಎಚ್‌ಎಐ ಹೆದ್ದಾರಿಗಳ ೮೯ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಿದೆ ಎಂದು ಹೇಳಲಾಗುತ್ತದೆ.
ಬೆಂಗಳೂರು-ನಿಡಘಟ್ಟ ಎಕ್ಸ್‌ವೇ ಸೆಕ್ಷನ್‌ನಲ್ಲಿ ಎರಡು ಟೋಲ್ ಪ್ಲಾಜಾಗಳು ಇವೆ. ನಿಡಘಟ್ಟ-ಮೈಸೂರು ಸೆಕ್ಷನ್‌ನಲ್ಲಿ ಇನ್ನೆರಡು ಟೋಲ್ ಪ್ಲಾಜಾಗಳನ್ನು ಎನ್‌ಎಚ್‌ಎಐ ಅಳವಡಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೂ, ಬಿಡದಿ, ಚನ್ನಪಟ್ಟಣ ಮತ್ತು ರಾಮನಗರಕ್ಕೆ ತೆರಳುವವರಿಗೆ ಉಂಟಾಗುವ ಅನಾನುಕೂಲದ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಎಚ್‌ಎಐ ಅಧಿಕಾರಿಗಳು, ಎಕ್ಸ್‌ಪ್ರೆಸ್ ವೇಯ ಇಕ್ಕೆಲಗಳಲ್ಲೂ ಎರಡು ಲೇನ್‌ಗಳ ಸರ್ವೀಸ್ ರಸ್ತೆ ಇದ್ದು, ಅದರಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಉಲ್ಲೇಖಿಸಿದ್ದಾರೆ.