ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ತೊಗರಿ ರಸ್ತೆ ಮೇಲೆ ಹಾಕಿ ಕಾಳಗಿಯಲ್ಲಿ ಪ್ರತಿಭಟನೆ

ಕಲಬುರಗಿ:ಡಿ.26:ಬೆಂಬಲ ಬೆಲೆಯನ್ನು 8000ರೂ.ಗಳಿಗೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕಾಳಗಿಯ ಡಾ. ಅಂಬೇಡ್ಕರ್ ವೃತ್ತದಲ್ಲಿ ತೊಗರಿಯನ್ನು ರಸ್ತೆಗೆ ಹಾಕಿ ವಿನೂತನವಾಗಿ ಪ್ರತಿಭಟಿಸಿದರು.

ತೊಗರಿಯ ನಾಡು, ತೊಗರಿಯ ಕಣಜವಾಗಿರುವ ಜಿಲ್ಲೆಯಲ್ಲಿ ತೊಗರಿ ಕಟಾವು ನಡೆದಿದ್ದು, ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಗ್ರಹಿಸಿದ ಪ್ರತಿಭಟನೆಕಾರರು, ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸಿನಂತೆ ಪ್ರತಿ ಕ್ವಿಂಟಲಿಗೆ 8000ರೂ.ಗಳ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರು.
ಹೊರದೇಶದ ತೊಗರಿ ಮೇಲ ಶೇಕಡಾ 30ರಷ್ಟು ಆಮದು ತೆರಿಗೆ ವಿಧಿಸುವಂತೆ, ರೈತರು ಬೆಳೆದಷ್ಟು ತೊಗರಿಯನ್ನು ಸಂಪೂರ್ಣವಾಗಿ ಖರೀದಿಸುವಂತೆ, ಹೊರದೇಶದ ತೊಗರಿ ಖರೀದಿಯನ್ನು ಕೈಬಿಡುವಂತೆ, ತೊಗರಿ ಖರೀದಿ ರೈತರ ಹೆಸರು ನೊಂದಣಿ ವಿಸ್ತರಿಸುವಂತೆ, ಪ್ರತಿ ಕ್ವಿಂಟಲ್ ತೊಗರಿಗೆ 2000ರೂ.ಗಳ ಪ್ರೋತ್ಸಾಹ ಧನ ಕೊಡುವಂತೆ ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕೋಡ್ಲಿ ಸಂಚಾಲಕ ಗುರುನಂದೇಶ್ ಕೋಣಿನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಲ್ತಾಫ್ ಇನಾಮದಾರ್, ತಾರಾಚಂದ್, ಮಲ್ಲು ಚಿಕ್ಕಾಗಸಿ, ರಾಮಚಂದ್ರ, ರಾಮು ನಾಯಕ್, ಮಲ್ಲಮ್ಮ ಮಗಿ, ಸೆಳ್ಳಗಿ ಮುಂತಾದವರು ಪಾಲ್ಗೊಂಡಿದ್ದರು.