ಬೆಂಬಲ ಬೆಲೆಯಲ್ಲಿ ಜೋಳ ಭತ್ತ ಖರೀದಿಗೆ ರೈತ ಸಂಘ ಒತ್ತಾಯ

ಬಳ್ಳಾರಿ ಏ 25 : ಬೆಂಬಲ ಬೆಲೆಯಲ್ಲಿ ಜೋಳ ಹಾಗೂ ಭತ್ತ ಖರೀದಿಯನ್ನು ಮಾಡಬೇಕು. ರೈತರು ಬೆಳೆದ ಜೋಳ ಖರೀದಿಗೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೇಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ನಿನ್ನೆ ಮನವಿ ಸಲ್ಲಿಸಿದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಮ್ಮದೇ ಆದ ಕಾನೂನನ್ನು ಜಾರಿಗೊಳಿಸಿ ರೈತರು ಮಾರುಕಟ್ಟೆಗೆ ತಂದಿರುವ ಜೋಳವನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಭತ್ತದ ಕಥೆಯೂ ಇದೇ ಆಗಿದೆ. ಭತ್ತ ಹಾಗೂ ಜೋಳವನ್ನು ಬೆಳೆದ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ,ಇಲ್ಲಿನ ಅಧಿಕಾರಿಗಳು ಖರಿದಿಸಲು ಮುಂದಾಗುತ್ತಿಲ್ಲ, ರೈತರು ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಿಳಿಜೋಳವನ್ನು ತಂದಿದ್ದು, ಅಧಿಕಾರಿಗಳು ಖರೀದಿಸದೆ ಲಾರಿಗಳನ್ನು ವಾಪಸ್ಸು ಕಳಿಸುತ್ತಿದ್ದಾರೆ. ಕಾರಣ ಕೇಳಿದರೇ ಹಮಾಲರ ಕೊರತೆ ನೆಪವೊಡ್ಡುತ್ತಿದ್ದಾರೆ. ಕೆಲ ದಿನಗಳಲ್ಲಿಯೇ ಭತ್ತವೂ ಮಾರುಕಟ್ಟೆಗೆ ಬರಲಿದ್ದು, ಇದೇ ಪರಿಸ್ಥಿತಿ ಮುಂದುವರೆದರೇ ರೈತರ ಪಾಡೇನು ಎಂದು ರೈತರು ಪ್ರಶ್ನಿಸಿದರು.
ಬಿಳಿಜೋಳ ಹಾಗೂ ಭತ್ತ ಖರೀದಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ, ಕಂಪ್ಲಿ ಘಟಕದ ತಾಲೂಕು ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ ಇತರರು ಉಪಸ್ಥಿತರಿದ್ದರು.