ಬೆಂಬಲ ಬೆಲೆಯಲ್ಲಿ ಖರೀದಿಸಲು ಬೇಡಿಕೆ ಬಂದಲ್ಲಿ ರೈತರ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆ ಪ್ರಾರಂಭಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ನ.19-2021-22 ನೇ ಸಾಲಿನಲ್ಲಿ ಭತ್ತ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರೈತರಿಂದ ಬೇಡಿಕೆ ಬಂದಲ್ಲಿ ರೈತರ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಆದೇಶದಂತೆ 2021-22 ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್‍ಗೆ ರೂ.1940-00, ಭತ್ತ ಗ್ರೇಡ್-ಎ ಪ್ರತಿ ಕ್ವಿಂಟಾಲ್‍ಗೆ ರೂ.1960-00 ದರದಂತೆ ಖರೀದಿಸಲು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಕುರಿತು ಪರಿಶೀಲಿಸಲಾಯಿತು.
ಅದರಂತೆ ಜಿಲ್ಲೆಯ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭತ್ತ 120 ಹೆಕ್ಟೇರು ಕ್ಷೇತ್ರದಲ್ಲಿ ಅತಿ ಕಡಿಮೆ ಬಿತ್ತನೆಯಾಗಿದ್ದು ಅಂದಾಜು 15000 ಕ್ವಿಂಟಲ್ ಇಳುವರಿ ಬರಬಹುದೆಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ವಿಜಯಪುರ ಜಿಲ್ಲೆಯ ವಿಜಯಪುರ, ತಾಳಿಕೋಟಿ, ಸಿಂದಗಿ, ಇಂಡಿ ಹೀಗೆ ಒಟ್ಟು 4 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣದಲ್ಲಿ ಭತ್ತ ಉತ್ಪನ್ನವು ಮಾರಾಟಕ್ಕಾಗಿ ಬಂದಿರುವುದಿಲ್ಲವೆಂದು ಮಾರುಕಟ್ಟೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಎಂ.ಡಿ.ಚಬನೂರ, ಸದಸ್ಯ ಕಾರ್ಯದರ್ಶಿ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ, ಹಾಗೂ ಸಹಾಯಕ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ವಿಜಯಪುರ ಇವರು ಸೇರಿದಂತೆ ಇತರರು ಉಪಸ್ಥಿತರಿದ್ದರು.