ಬೆಂಬಲಬೆಲೆಗೆ ಆಗ್ರಹಿಸಿ ಪ್ರತಿಭಟನೆ ಬಿ.ಆರ್ ಪಾಟೀಲ ಸೇರಿ ಹಲವರ ಬಂಧನ

ಕಲಬುರಗಿ ಮಾ 15: ತೊಗರಿ ಖರೀದಿ ಕೇಂದ್ರಗಳ ಮೂಲಕ 8 ಸಾವಿರ ರೂ ಬೆಂಬಲ ಬೆಲೆಯೊಂದಿಗೆ ತೊಗರಿ ಖರೀದಿಗೆ ಆಗ್ರಹಿಸಿ ಇಂದು ಐಕ್ಯ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನೆಲಕ್ಕೆ ತೊಗರಿ ಕಾಳು ಸುರುವಿ ಪ್ರತಿಭಟನಾ ಪ್ರದರ್ಶನ ನಡೆಸುತ್ತಿದ್ದ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿ.ಆರ್ ಪಾಟೀಲ,ಅಲ್ಲಮಪ್ರಭು ಪಾಟೀಲ, ಉಮಾಪತಿ ಮಾಲಿ ಪಾಟೀಲ,ಶಾಮ ನಾಟೀಕರ,ಶೌಕತ ಅಲಿ ಆಲೂರ,ಗಣಪತರಾವ ಮಾನೆ ಸೇರಿದಂತೆ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು.
ಕೃಷಿ ಸಚಿವರು ನಗರಕ್ಕೆ ಬಂದಾಗ ತೊಗರಿಗೆ 8 ಸಾವಿರ ರೂ ಬೆಂಬಲಬೆಲೆ ನೀಡುವದಾಗಿ ಹೇಳಿದ್ದರು.ಖರೀದಿ ಕೇಂದ್ರ ತೆರೆದಿದ್ದರೂ ಖರೀದಿ ನಡೆದಿಲ್ಲ.ಬೆಂಬಲ ಬೆಲೆ ಘೋಷಿಸಿಲ್ಲ.ಬಜೆಟ್ ನಲ್ಲಿ ಬೆಂಬಲ ಬೆಲೆ ನೀಡುವ ಘೋಷಣೆ ಹುಸಿಯಾಗಿದೆ ಎಂದು ದೂರಿದ ಪ್ರತಿಭಟನಾನಿರತ ಮುಖಂಡರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.