ಬೆಂದರಷ್ಟೆ ಬೇಂದ್ರೆಯಾಗಲು ಸಾಧ್ಯ

ಕಲಬುರಗಿ:ನ.7: ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ, ಅವುಗಳನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ್ದರಿಂದ ಬೇಂದ್ರೆಯವರ ಸಾಹಿತ್ಯವು ಹೆಚ್ಚು ನೈಜತೆ ಹಾಗೂ ಗಟ್ಟಿತನದಿಂದ ಕೂಡಿದೆ. ಅವರ ಹಾಗೆಯೆ ಸಾಹಿತ್ಯಕವಾಗಿ ಸಾಧನೆ ಮಾಡಬೇಕಾದರೆ, ಸಾಹಿತ್ಯ ಸಾಧನೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯವಿದೆಯೆಂದು ಕನ್ನಡ ಪಂಡಿತ ಕೆ.ಬಸವರಾಜ ಅಭಿಮತ ವ್ಯಕ್ತಪಡಿಸಿದರು.

    ಅವರು ನಗರದ ಖಾದ್ರಿ ಚೌಕ್‍ನಲ್ಲಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಜರುಗುತ್ತಿರುವ 'ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು' ಸರಣಿ ಕಾರ್ಯಕ್ರಮ-6ರಲ್ಲಿ ಶುಕ್ರವಾರ ಆಯೋಜಿಸಿದ್ದ 'ಕನ್ನಡಕ್ಕೆ ದ.ರಾ.ಬೇಂದ್ರೆಯವರ ಕೊಡುಗೆ' ಎಂಬ ವಿಷಯದ ವಿಶೇಷಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

  ಬೇಂದ್ರೆಯವರ ಸಾಹಿತ್ಯದಲ್ಲಿ ದೇಶಿ ಸೊಗಡು ಹಾಸು ಹೊಕ್ಕಿದೆ. ಮರಾಠಿ ಮಾತೃಭಾಷೆಯಾದರು ಕೂಡಾ, ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಸಾಮಾನ್ಯವಾದ ಸಂಗತಿಯಲ್ಲ. ವಿಶ್ವದ ವಿಕಾಸಕ್ಕೆ ಪುರುಷ, ಮಹಿಳೆ, ಸಂತಾನೋತ್ಪತ್ತಿ ಮತ್ತು ಪ್ರಕೃತಿಯು ನಾಲ್ಕು ಆಧಾರ ಸ್ಥಂಬಗಳಂತೆ ಕಾರ್ಯ ಮಾಡುತ್ತವೆಯೆಂಬ ಮೇರು ಸಂದೇಶವು ಅವರು ರಚಿಸಿದ ನಾಕುತಂತಿಯಿಂದ ನೀಡಿದ್ದಾರೆಂದು ನುಡಿದರು.

  ಕೊಹಿನೂರ ಸಂಸ್ಥೆ ಅಧ್ಯಕ್ಷ ಸತೀಶ ಸಣಮನಿ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ  ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯರ ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿನ ಪ್ರಮುಖವಾದ ಸಾಹಿತಿಯಾಗಿದ್ದಾರೆ.  ಮಾನವೀಯ ಮೌಲ್ಯಗಳಿಂದ ಕೂಡಿದ ಸಾಹಿತ್ಯ ಅವರದಾಗಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಅಶೋಕ ಸ್ವಾಮಿ, ಅಣ್ಣಾರಾವ ಬಿರಾದಾರ, ರಾಜಕುಮಾರ ಬಟಗೇರಿ, ಎಸ್.ಎಸ್.ಪಾಟೀಲ ಬಡದಾಳ, ವಿಠಲ ಕುಂಬಾರ, ಅರುಣಕುಮಾರ ಕಾಂದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.