ಬೆಂಜಮಿನ್ ವಿರುದ್ಧ ಪ್ರತಿಭಟನೆ ಬಿರುಸು

ಜೆರುಸೆಲಂ, ಆ., ೨- ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಇಸ್ರೆಲ್‌ನಲ್ಲಿ ಪ್ರತಿಭಟನೆ ಜೋರಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧಿಕೃತ ನಿವಾಸದ ಮುಂದೆ ನಿನ್ನೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಹಾಕಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರದ್ಧ ಇಸ್ರೇಲ್‌ನಲ್ಲಿ ಪ್ರತಿಭಟನೆಗಳು ಆರಂಭವಾದ ನಂತರ ರಾಜಧಾನಿ ಜೆರಿಸೆಲಂನಲ್ಲಿ ನಡೆದಿರುವ ಅತಿ ದೊಡ್ಡ ಱ್ಯಾಲಿ ಇದಾಗಿದೆ ಎಂದು ಇಸ್ರೇಲ್‌ನ ಟೈಂಸ್ ಪತ್ರಿಕೆ ವರದಿ ಮಾಡಿದೆ.
ಪ್ರಧಾನಿ ವಿರುದ್ಧ ನಡೆದ ಈ ಱ್ಯಾಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇಸ್ರೇಲ್‌ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಕರಾವಳಿ ನಗರ ಸಿಸೆರಿಯಾದಲ್ಲಿರುವ ಪ್ರಧಾನಿ ಅವರ ಖಾಸಗಿ ನಿವಾಸದ ಮುಂದೆಯೂ ಸಾವಿರಾರು ಮಂದಿ ಸೇರಿ ಪ್ರತಿಭಟನಾ ಪ್ರದರ್ಶನ ನಡೆಸಿದ್ದಾರೆ.
ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ನಾಗರಿಕರಿಗೆ ತೊಂದರೆಯಾಗಲು ಬಿಡುವುದಿಲ್ಲ. ಗಲಭೆ, ಕಾನೂನು ಉಲ್ಲಂಘನೆ ಮತ್ತು ವಿದ್ವಂಸಕ ಕೃತ್ಯಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ.
ದೀರ್ಘ ಕಾಲದ ರಾಜಕೀಯ ಅಸ್ಥಿರತೆಯ ನಂತರ ಇತ್ತೀಚೆಗಷ್ಟೇ ಅವರು ಅಧಿಕಾರಕ್ಕೆ ಮರಳಿ ಪ್ರಧಾನಿಯಾಗಿದ್ದರು. ಇಸ್ರೇಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.