ಬೆಂಜಮಿನ್ ವಿರುದ್ಧವೇ ರಕ್ಷಣಾ ಸಚಿವ ಗ್ಯಾಲಂಟ್ ಅಸಮಾಧಾನ

ಜೆರುಸಲೆಂ, ಮೇ ೧೬- ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ದ ಈಗಲೂ ಮುಂದುವರೆದಿರುವ ನಡುವೆಯೇ ಇದೀಗ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಜಾದ ಯುದ್ಧಾನಂತರದ ಯೋಜನೆಯ ಪ್ರಶ್ನೆಯನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹತಾಶೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಯುದ್ದದ ವಿಚಾರದಲ್ಲಿ ಇಸ್ರೇಲ್ ಸರಕಾರದೊಳಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಂತಾಗಿದೆ.
ಗಾಜಾದಲ್ಲಿ ನಾಗರಿಕ ಮತ್ತು ಮಿಲಿಟರಿ ಆಡಳಿತವನ್ನು ಇಸ್ರೇಲ್ ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸುವಂತೆ ನೆತನ್ಯಾಹು ಅವರಿಗೆ ಯೋವ್ ಗ್ಯಾಲಂಟ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ಯಾಲಂಟ್, ಅಕ್ಟೋಬರ್‌ನಿಂದ, ನಾನು ಕ್ಯಾಬಿನೆಟ್‌ನಲ್ಲಿ ನಿರಂತರವಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ ಮತ್ತು ಯಾವುದೇ ಪ್ರತಿಕ್ರಿಯೆಯನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದರು. ಇನ್ನು ಯೋವ್ ಗ್ಯಾಲಂಟ್ ಅಲ್ಲದೆ ಇಸ್ರೇಲ್‌ನ ಯುದ್ಧ ಕ್ಯಾಬಿನೆಟ್‌ನ ಇನ್ನೊಬ್ಬ ಸದಸ್ಯ ಬೆನ್ನಿ ಗ್ಯಾಂಟ್ಜ್ ಕೂಡ ಗ್ಯಾಲಂಟ್ ಹೇಳಿಕೆಗೆ ದನಿಗೂಡಿಸಿದ್ದಾರೆ. ಗ್ಯಾಲಂಟ್ ಅವರು ನಿಜಮಾತನಾಡುತ್ತಿದ್ದಾರೆ. ಎಲ್ಲಾ ವೆಚ್ಚದಲ್ಲಿಯೂ ದೇಶಕ್ಕಾಗಿ ಸರಿಯಾದ ಕೆಲಸವನ್ನು ಮಾಡುವುದು ನಾಯಕತ್ವದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಗಾಝಾ ಮೇಲೆ ಇಸ್ರೇಲ್ ದಾಳಿ ನಡೆಸಿದ ಆರಂಭದಲ್ಲಿ ಗ್ಯಾಲೆಂಟ್ ಅವರು ಸ್ಥಳೀಯ, ಪ್ರತಿಕೂಲವಲ್ಲದ ಪ್ಯಾಲೇಸ್ಟಿನಿಯನ್ ಆಡಳಿತ ಪರ್ಯಾಯವನ್ನು ಸ್ಥಾಪಿಸುವ ಪ್ರಸ್ತಾಪ ಮುಂದಿರಿಸಿದ್ದರು ಎಂಬ ವಿಚಾರವನ್ನು ಸ್ವತಹ ಅವರೇ ಬಹಿರಂಗಪಡಿಸಿದ್ದಾರೆ. ಅದರೆ ಸದ್ಯ ನಡೆಯುತ್ತಿರುವ ಸ್ಥಿತಿಗಳ ಬಗ್ಗೆ ಗ್ಯಾಲಂಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.