
ಬೆಂಗಳೂರು, ಮಾ.೨೫- ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಮ್ಮ ಬೆಂಗಳೂರು ಹಬ್ಬ ಜರುಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಕಲಾ ಪ್ರಕಾರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಬಾಲಭವನ ಆವರಣದ ಆಂಪಿಕ್ ಥಿಯೇಟರ್‌ನಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ ನಡೆಯಲಿದೆ.
ಇದರೊಂದಿಗೆ ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೋಲಿಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಕಲಾವಿದರ ದಂಡೇ ಬಂದಿದೆ.
ಪ್ರಮುಖವಾಗಿ ಇಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ವೇದಿಕೆಯಲ್ಲಿ ಸಂಜೆ ೬.೦೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅನನ್ಯ ಭಟ್, ನವೀನ್ ಸಜ್ಜು, ಜನಾರ್ಧನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಈ ಹಬ್ಬದಲ್ಲಿ ರಾಜ್ಯದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಕಲಾವಿದರು, ಚಲನಚಿತ್ರಗಳು ಮತ್ತು ಆಹಾರದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಹಬ್ಬವಾಗಿದೆ.
ಬೆಂಗಳೂರಿನ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜಯನಗರ ಸಾಮ್ರಾಜ್ಯದ ದೊರೆ ನಾಡಪ್ರಭು ಕೆಂಪೇಗೌಡರಿಗೆ ಈ ಬೆಂಗಳೂರು ಹಬ್ಬದ ಮೂಲಕ ಗೌರವ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ ೨೬ ರಂದು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.