ಬೆಂಗಳೂರು ವಿವಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಿ ಸದರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಆಡಳಿತ) ಕೆ ಜ್ಯೋತಿ ಅವರು ಅದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿರುವ ಸುಮಾರು ೫೦೦ ನೌಕರರು ಇಂದು ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಿಜಿಸ್ಟ್ರಾರ್ ಜ್ಯೋತಿ ಅವರು ಗುತ್ತಿಗೆ ನೌಕರರನ್ನು ವಜಾಗೊಳಿಸಿದ ನಂತರ ಉಪಕುಲಪತಿ ಕೆ ಆರ್ ವೇಣುಗೋಪಾಲ್, ರಿಜಿಸ್ಟ್ರಾರ್ ಅವರು ಮಾಡಿರುವ ಆದೇಶವನ್ನು ರದ್ದು ಮಾಡಿರುವುದಾಗಿ ಹೇಳಿದ್ದಾರೆ.ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನವಾಗುವವರೆಗೆ ವಜಾ ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ,ರಿಜಿಸ್ಟ್ರಾರ್ ಅವರು ನಿಯಮಬಾಹಿರವಾಗಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ.ಹಾಗಾಗಿ ಹೊರಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಕೆಲಸ ಕಳೆದುಕೊಂಡು ಒಮ್ಮೆಗೆ ಬೀದಿಗೆ ಬಿದ್ದಿರುವ ನೌಕರರ ಪಾಲಿಗೆ ನವರಾತ್ರಿ ನಿಜಕ್ಕೂ ಅವರ ಪಾಲಿಗೆ ಅಮವಾಸ್ಯೆ ಆಗಿದೆ.
ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದ,ಇದನ್ನೇ ನಂಬಿ ಬದುಕು ನಡೆಸುತ್ತಿದ್ದ ಸುಮಾರು೫೦೦ ಜನರ ಬದುಕು ಮೂರಾಬಟ್ಟೆಯಾಗಿದೆ.
ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ವಿಶ್ವವಿದ್ಯಾಲಯ ಅನುಸರಿಸುತ್ತಿರುವ ಕ್ರಮ,ಸರ್ಕಾರ ನೀತಿ,ಮಾರ್ಗಸೂಚಿಗಳಿಗೆ ಅನುಸಾರವಾಗಿಲ್ಲ.ಹೊರಗುತ್ತಿಗೆ ನೌಕರರನ್ನು ಹೊರಗುತ್ತಿಗೆದಾರ ಸಂಸ್ಥೆಯಿಂದ ಪಡೆದುಕೊಳ್ಳಬೇಕು.ಅಲ್ಲದೇ ಮಂಜೂರಾದ ಹುದ್ದೆಗಳಿಗೆ ಅರ್ಹತೆಯ ಮಾನದಂಡ ಅನುಸರಿಸಿ ನೇಮಕ ಮಾಡಿಕೊಳ್ಳಬೇಕು ಆದರೆ ಅದೆಲ್ಲವನ್ನೂ ಗಾಳಿಗೆ ತೂರಲಾಗಿದೆ ಎಂದು ರಿಜಿಸ್ಟ್ರಾರ್ ಜ್ಯೋತಿ ಅವರು ಹೇಳುತ್ತಾರೆ.
ಒಟ್ಟಿನಲ್ಲಿ ಅಧಿಕಾರಿಗಳು ಮಾಡಿಕೊಂಡು ಬಂದಿರುವ ಎಡವಟ್ಟುಗಳಿಗೆ ನೂರಾರು ಬಡಪಾಯಿ ನೌಕರರು ಬಲಿಯಾಗಿದ್ದಾರೆ.ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಗಮನಹರಿಸಿ ಸಕಾರಾತ್ಮಕವಾಗಿ ಸಮಸ್ಯೆ ಬಗೆಹರಿಸಬೇಕಿದೆ.