ಬೆಂಗಳೂರು, ರಾಜಕುಮಾರ್ ರಸ್ತೆಯಲ್ಲಿಂದು ಪಾಲಿಕೆಯಿಂದ ಆಪರೇಷನ್ ಫುಟ್ ಪಾತ್ ಶುರು

* ಎರಡು ತಂಡಗಳಲ್ಲಿ ಕಾರ್ಯಾಚರಣೆ
* ಆಯುಕ್ತರ ನೇತೃತ್ವ
* ಪೊಲೀಸರ ಬಂದೋಬಸ್ತು
* ಫುಟ್ ಪಾತ್ ಅತಿಕ್ರಮಣ ತೆರವು
* ಖಾಲಿ ಖಾಲಿಯಾದ ಫುಟ್ ಪಾತ್ ಗಳು
* ಕಾರ್ಯಾಚರಣೆಗೆ ಜನರ ಮೆಚ್ಚುಗೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ನಗರದಲ್ಲಿನ ಫುಟ್ ಪಾತ್ ಗಳನ್ನು ಅತಿಕ್ರಮಿಸಿ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಮತ್ತು ಇಡೀ ಫುಟ್ ಪಾತ್ ಅತಿಕ್ರಮಿಸಿ ಮಾರಾಟದ ಸರಕು ಇಡುತ್ತಿದ್ದರ ಬಗ್ಗೆ ರಸ್ತೆಗಳಲ್ಲಿ ಸಂಚರಿಸುವ ರೋಸಿ ಹೋಗಿದ್ದ ಜನತೆಗೆ ಒಂದಿಷ್ಟು ನೆಮ್ಮದಿ ತರಲು ಇಂದು ಮಹಾನಗರ ಪಾಲಿಕೆ ಆಪರೇಷನ್ ಫುಟ್ ಪಾತ್ ಕಾರ್ಯಾಚರಣೆ ಆರಂಭಿಸಿದೆ.
ಇಂದು ಬೆಳಿಗ್ಗೆ 10 ಗಂಟೆಯಿಂದ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸ್ವತಃ ಮುಂದೆ ನಿಂತು ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ಬೆಂಗಳೂರು ರಸ್ತೆ ಮತ್ತು ಇಂದಿರಾಗಾಂಧಿ ವೃತ್ತದಿಂದ ರಾಜ್ ಕುಮಾರ್ ರಸ್ತೆಯನ್ನು ಆಯುರ್ವೇದ ಕಾಲೇಜ್ ಕಡೆ ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿ ಫುಟ್ ಪಾತ್ ಒತ್ತುವರಿ ಮಾಡಿದ್ದನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯ ನಡೆಯಿತು.
ಇಡೀ ಫುಟ್ ಪಾತ್, ಅರ್ಧ ಫುಟ್ ಪಾತ್ ಅಕ್ರಮಿಸಿಕೊಂಡು ಕಟ್ಟೆ ಮೆಟ್ಟಿಲುಗಳನ್ನು ನಿರ್ಮಿಸಿದ್ದನ್ನು ಕಿತ್ತುಹಾಕಲಾಯಿತು. ಅಲ್ಲದೆ ಟೀ, ಹಣ್ಣು, ಬಟ್ಟೆ ಮೊದಲಾದವುಗಳನ್ನು ಮಾರಾಟ ಮಾಡಲು ಇಟ್ಟಿದ್ದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿತು.
ಫುಟ್ ಪಾತ್ ಗಳನ್ನು ಅತಿಕ್ರಮಿಸಿ ವ್ಯಾಪಾರ ವಹಿವಾಟಿನ ಸರಕು ಸರಂಜಾಮ್ ಗಳನ್ನು ಇಡದಂತೆ ಹಲವು ದಿನಗಳ ಹಿಂದೆಯೇ ಆಯುಕ್ತರು ಪ್ರಕಟಣೆ ಮೂಲಕ ತಿಳಿಸಿದ್ದರೂ ಯಾರು ಇದನ್ನು ಪಾಲಿಸಿರಲಿಲ್ಲ. ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಗೊಳ್ಳುತ್ತಿದ್ದಂತೆ ರಸ್ತೆಯಲ್ಲಿ ಹೂ, ಹಣ್ಣು, ತರಕಾರಿ ಮಾರಾಟಗಾರರು ತೇರು ಬೀದಿಗೆ ವರ್ಗವಾದರೆ ದಿನನಿತ್ಯ ಫುಟ್ ಪಾತ್ ಮೇಲೆ ಇರಿಸುತ್ತಿದ್ದ ಸಾಮಾನುಗಳನ್ನು ಅಂಗಡಿ ಮಳಿಗೆಯಲ್ಲಿಯೇ ಇರಿಸಿಕೊಂಡರು. ಇದರಿಂದ ಇಂದು ಬೆಂಗಳೂರು ರಸ್ತೆಯ ಫುಟ್ ಪಾತ್ ಗಳಲ್ಲಿ ರಹದಾರಿಗಳಂತೆ ಗೋಚರಿಸುತ್ತಿದ್ದವು. ಕಾರ್ಯಾಚರಣೆ ನಡೆದಿದ್ದರಿಂದ ಬೆಂಗಳೂರು ರಸ್ತೆಯ ವಹಿವಾಟು ಬಹುತೇಕ ಮೀನಾಕ್ಷಿ ಸರ್ಕಲ್ ನಿಂದ ಕಾಳಮ್ಮ ಸರ್ಕಲ್ ವರೆಗೆ ಬಂದ್ ಆದಂತೆ ಇತ್ತು.
ಅದೇ ರೀತಿ ರಾಜ್ ಕುಮಾರ್ (ಅನಂತಪುರಂ) ರಸ್ತೆಯಲ್ಲೂ ಕಾರ್ಯಾಚರಣೆ ನಡೆಯಿತು. ಎಂ.ಜಿ.ಸರ್ಕಲ್ ನಲ್ಲಿ ಪುಟ್ ಪಾತ್ ಒತ್ತುವರಿ ಮಾಡಿ ಇಡಲಾಗಿದ್ದ ಅಂಗಡಿಗಳ ತೆರವು ನಡೆಯಿತು.
ಈ ಕಾರ್ಯಾಚರಣೆಯಿಂದ ಇಂದಿರಾಗಾಂಧಿ ವೃತ್ತ ಈಗ ಸಂಪೂರ್ಣ ಬೀದಿ ಬದಿ ವ್ಯಾಪಾರಿಗಳಿಂದ ಮುಕ್ತಗೊಂಡಿದೆ. ಅಷ್ಟೇ ಅಲ್ಲದೆ ಇಂದು ಹೂ, ಹಣ್ಣು, ಇತರೇ ಸಾಮಾನುಗಳನ್ನು ಇಡೀ ಫುಟ್ ಪಾತ್ ಆಕ್ರಮಿಸಿಕೊಂಡು ಇಡುತ್ತಿದ್ದವರು ಹಿಂದೆ ಸರಿದುಕೊಂಡು ವ್ಯವಹರಿಸುತ್ತಿದ್ದುದು ಕಂಡುಬಂತು.

ವಿರೋಧವಿಲ್ಲ ಆಗಬೇಕಿತ್ತು
ಕಾರ್ಯಾಚರಣೆಗೆ ಎಲ್ಲಿ ವಿರೋಧ ಕಂಡು ಬರಲಿಲ್ಲ. ಆಯುಕ್ತರು ಐ.ಎ.ಎಸ್ ಅಧಿಕಾರಿಗಳು ಅವರು ಯಾರ ಮಾತನ್ನು ಕೇಳಲ್ಲ ಕಾನೂನು ರೀತಿಯಲ್ಲಿಯೇ ಎಲ್ಲವುದನ್ನು ಕೈಗೊಂಡಿದ್ದಾರೆ. ಹೆಚ್ಚು ಕಮ್ಮಿ ಮಾತನಾಡಿದರೆ ಅಂಗಡಿ ಮಳಿಗೆಯ ಲೈಸೆನ್ಸ್ ತೆರಿಗೆ ಮೊದಲಾದವುಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಯಾಕೆ ಬೇಕಪ್ಪ ಎಂಬ ಮಾತುಗಳು ಕೇಳಿ ಬಂದವು.
ಸ್ಥಳೀಯ ಕಾರ್ಪೊರೇಟರ್ ನೂರ್ ಮಹಮ್ಮದ್, ಮುಖಂಡ ಸುರೇಂದ್ರ ಮೊದಲಾದವರು ಕಾರ್ಯಾಚರಣೆ ಸ್ಥಳಕ್ಕೆ ಬಂದರೂ ಕಿಮಕ್ ಎನ್ನದೇ ಇದ್ದರು. ಒಂದಿಬ್ಬರು ಬೀದಿ ಬದಿಯ ವ್ಯಾಪಾರಿ ಮಹಿಳೆಯರು ಕೂಗಾಡಲು ಹೊರಟಾಗ ಪೊಲೀಸರು ಆಕೆಗೆ ಬುದ್ದಿವಾದ ಹೇಳಿ ಕಳುಹಿಸಿದರು.
ರಸ್ತೆಯಲ್ಲಿ ಓಡಾಡುತ್ತಿದ್ದ ಜನ ಇದು ಆಗಬೇಕಿತ್ತು. ಇಂತಹ ದಿಟ್ಟ ನಿರ್ಧಾರದ ಅಧಿಕಾರಿಗಳು ಇರಬೇಕು ಎನ್ನುತ್ತಿದ್ದರು.