ಬೆಂಗಳೂರು-ಮೈಸೂರು ಹೈವೇ: ಸಣ್ಣ ಮಳೆಗೇ ಮುಳುಗಿದ ಕೆಳಸೇತುವೆ

ಮಂಡ್ಯ: ಮೇ.10:- ಬೆಂಗಳೂರು- ಮೈಸೂರು ದಶಪಥ ಕಾಮಗಾರಿ ಉದ್ಘಾಟನೆಯಾಗಿ ತಿಂಗಳಾದರೂ ಸರ್ವೀಸ್ ರಸ್ತೆಯ ಅವ್ಯವಸ್ಥೆ ತಪ್ಪಿಲ್ಲ.ಕಳೆದೊಂದು ವಾರದಿಂದ ಸುರಿಯುತ್ತಿರುವ ಸಣ್ಣ ಮಳೆಗೇ ಕೆಳಸೇತುವೆಗಳು ಮುಳುಗಿದ್ದು, ದೊಡ್ಡ ಮಳೆ ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರು ಪಥಕ್ಕೆ ನೀಡಿದ ಆದ್ಯತೆಯನ್ನು ಸರ್ವೀಸ್ ರಸ್ತೆ ಕಾಮಗಾರಿಗೆ ನೀಡಿಲ್ಲ. ಬೆಂಗಳೂರು- ಮೈಸೂರು ಸಂಚಾರವಷ್ಟೇ ಪ್ರಾಧಿಕಾರಕ್ಕೆ ಮುಖ್ಯವಾಗಿದ್ದು, ಸ್ಥಳೀಯ ಹಳ್ಳಿ ಜನ ಅನುಭವಿಸುತ್ತಿರುವ ತೊಂದರೆಗಳತ್ತ ಗಮನ ಹರಿಸುತ್ತಿಲ್ಲ. ಸರ್ವೀಸ್ ರಸ್ತೆಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಮಳೆನೀರು ಇಳಿಜಾರು ಹಾಗೂ ಗುಂಡಿಯಂತಿರುವ ಕೆಳಸೇತುವೆಯತ್ತ ನುಗ್ಗುತ್ತಿದೆ.
ಇಂಡುವಾಳು ಗ್ರಾಮದ ಬಳಿ ಬಾಕಿ ಉಳಿದಿದ್ದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಸರ್ವೀಸ್ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ಜನ ಓಡಾಡಲು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಫುಟ್‍ಪಾತ್ ಕೂಡ ಇಲ್ಲದೆ ರೈತರು ಜಾನುವಾರುಗಳ ಜೊತೆ ಹೊಲಕ್ಕೆ ತೆರಳಲು ಪರದಾಡುತ್ತಿದ್ದಾರೆ.
ಈಚೆಗೆ ಸುರಿದ ಮಳೆ ನೀರು ಇಂಡುವಾಳು ಗ್ರಾಮದ ಕೆಳಸೇತುವೆಯ ಒಳಗೆ ನುಗ್ಗಿದ್ದು ಅಲ್ಲಿ ಕಟ್ಟೆಯಂತಾಗಿದೆ.ಮಂಡಿಯುದ್ದ ನೀರು ನಿಂತಿದ್ದು ಓಡಾಡಲು ಸಾಧ್ಯವಿಲ್ಲದಂತಾಗಿದೆ. ಪಕ್ಕದ ಚರಂಡಿಯು ರಸ್ತೆಯ ಮೇಲ್ಮಟ್ಟದಲ್ಲಿರುವುದರಿಂದ ನೀರು ಚರಂಡಿಗೆ ಹರಿದು ಹೋಗುವ ಅವಕಾಶವೇ ಇಲ್ಲ.
ಒಂದೆಡೆಯಿಂದ ಇನ್ನೊಂದೆಡೆಗೆ ಓಡಾಡುವ ಜನರಿಗೆ ಕೆಳಸೇತುವೆಯಲ್ಲಿ ನಿಂತಿರುವ ನೀರು ಅಡ್ಡಿಯಾಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಳಸೇತುವೆಯಲ್ಲಿ ನೀರು ನಿಂತಿದ್ದು ಮಕ್ಕಳು, ಮಹಿಳೆಯರು ಓಡಾಡಲು ಸಾಧ್ಯವಾಗುತ್ತಿಲ್ಲ, ಇದರಿಂದ ಇಂಡುವಾಳು ಗ್ರಾಮ ಇಬ್ಭಾಗವಾಗಿದೆ. ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನನ್ನು ಕೇಳಿದರೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಮಾತನಾಡುತ್ತಾರೆ.ಮುಂಗಾರು ಮಳೆ ಆರಂಭವಾಗುತ್ತಿದ್ದು ಭಾರಿ ಮಳೆ ಸುರಿದರೆ ಸರ್ವೀಸ್ ರಸ್ತೆಯೇ ಮುಳುಗುವ ಅಪಾಯವಿದೆ’ ಎಂದು ಇಂಡುವಾಳು ಬಸವರಾಜು ಹೇಳಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಹನಕೆರೆ, ಬೂದನೂರು, ಉಮ್ಮಡಹಳ್ಳಿ, ಸಿದ್ದಯ್ಯನಕೊಪ್ಪಲು ಕಾಳೇನಹಳ್ಳಿ, ತೂಬಿನಕೆರೆ ಸೇರಿ ಒಟ್ಟು 15 ಕಡೆ ಕೆಳ ಸೇತುವೆ ನಿರ್ಮಿಸಲಾಗಿದೆ. ಬಹುತೇಕ ಕೆಳಸೇತುವೆಗಳು ಇಳಿಜಾರಿನಂತಿದ್ದು ಮಳೆ ನೀರು ನಿಲ್ಲುತ್ತಿದೆ. ಉಮ್ಮಡಹಳ್ಳಿ ಬಳಿಯ ಕೆಳಸೇತುವೆಯೇ ಕಾಲುವೆಯಂತಾ
ಗಿದ್ದು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಬಸ್ ನಿಲ್ದಾಣ ನುಂಗಿದ ರಸ್ತೆ ರಸ್ತೆಯ ನಡುವಿನ ಹಳ್ಳಿಗಳಲ್ಲಿ ಸ್ಥಳೀಯ ವಾಹನಗಳ ನಿಲುಗಡೆಗೆ ಇದ್ದ ಜಾಗವನ್ನು ಸರ್ವೀಸ್ ರಸ್ತೆ ಆವರಿಸಿಕೊಂಡಿದೆ.ಈಗ ರಸ್ತೆಯಲ್ಲೇ ವಾಹನ ನಿಲ್ಲಬೇಕು.ಒಂದು ವಾಹನ ರಸ್ತೆಯಲ್ಲಿ ನಿಂತರೆ ಹಿಂದೆ ಬರುವ ವಾಹನವೂ ನಿಲ್ಲಲೇಬೇಕು. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ.ಶಾಲಾ ಮಕ್ಕಳು ಬಸ್ ಹತ್ತಲು ತೊಂದರೆ ಅನುಭವಿಸುತ್ತಿದ್ದಾರೆ.ನಿಲ್ಲಲು ಫುಟ್‍ಪಾತ್ ಕೂಡ ಇಲ್ಲದಿರುವುದು ಅವರ ಜೀವಕ್ಕೂ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಯಲಿಯೂರು ಗ್ರಾಮದ ಶಾರದಮ್ಮ ಕಳವಳ ವ್ಯಕ್ತಪಡಿಸಿದರು.