ಬೆಂಗಳೂರು- ಮೈಸೂರು ಹೆದ್ದಾರಿಗೆ ಎಚ್‌ಡಿಡಿ ಹೆಸರಿಡಿ

ಬೆಂಗಳೂರು, ಜ. ೫- ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ವೀಕ್ಷಣೆಗೆ ಮತ್ತು ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದೆ ಆದರೆ ಈ ಮಹಾರಸ್ತೆಗೆ ಮಾಜಿ ಪ್ರಧಾನಿ , ಕರ್ನಾಟಕದ ಸಾಕ್ಷಿ ಪ್ರಜ್ಞೆ ದೇವೇಗೌಡರ ಹೆಸರಿಡಿ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮನವಿ ಮಾಡಿದ್ದಾರೆ.
ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ. ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ . ಇದನ್ನು ಮನಗಂಡು ಈ ದಿಗ್ಗಜ ನಾಯಕರ ಹೆಸರಿಗೆ ಗೌರವಿಸುವ ದೃಷ್ಟಿಯಿಂದ ಈ ದಶ ಪಥ ರಸ್ತೆಗೆ ಅವರ ಹೆಸರಿಡುವುದು ಸೂಕ್ತ ಎಂದು ಶರವಣ ಕೋರಿದ್ದಾರೆ.
ನಾಡಿನ ಜೀವ ನದಿಗಳಾದ ಕಾವೇರಿ ಹೋರಾಟದಿಂದ ಹಿಡಿದು, ಕೃಷ್ಣೆಯ ವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ ಅವರು ಹೇಳಿದ್ದಾರೆ. ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆ. ದಶ ಪಥ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ ಎಂದು ಹೇಳಿದ್ದಾರೆ. ರಾಜ್ಯದ ಬಿಜೆಪಿ ಸರಕಾರ ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಬೆಂಗಳೂರು -ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶರವಣ ಮನವಿ ಮಾಡಿದ್ದಾರೆ.