ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಒಂದೇ ರಾತ್ರಿ ಎರಡು ಕಡೆ ದರೋಡೆ ನಡೆದಿದೆ

ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗೇಟ್ ಮತ್ತು ಗೌರಿಪುರ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಬೆದರಿಸಿ ಚಿನ್ನಾಭರಣ ದೋಚಿದ್ದಾರೆ. ಶನಿವಾರ ತಡರಾತ್ರಿ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ದರೋಡೆ ಮಾಡಿ ಪರಾರಿಯಾಗಿದ್ದು,ರಾತ್ರಿ ವೇಳೆ ಪ್ರಯಾಣಿಸುವವರನ್ನು ದರೋಡೆಕೋರರು ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದಾರೆ.
ನಗುವನಹಳ್ಳಿ ಗೇಟ್ ಬಳಿಯ ಭಾರತ್ ಬೆಂಚ್ ಕಂಪೆನಿ ಎದುರು ಉಡುಪಿಯ ಶಿವಪ್ರಸಾದ- ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ದಂಪತಿ ಬೆದರಿಸಿ 30 ಗ್ರಾಂ ಚಿನ್ನಾಭರಣ ದೋಚಿದ್ದಾರೆ.
ಇದಾದ ಕೆಲ ಹೊತ್ತಿನಲ್ಲಿ ಗೌರಿಪುರ ಬಳಿ ದುಷ್ಕರ್ಮಿಗಳು ಕೋಲಾರ ಜಿಲ್ಲೆ ಮಾಲೂರಿನ ಡಾ. ರಕ್ಷಿತ್ ರೆಡ್ಡಿ ಮತ್ತು ಡಾ.ಮಾನಸ ದಂಪತಿಗೆ ಬೆದರಿಸಿ 40 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.
ಮೈಸೂರಿಗೆ ತೆರಳುತ್ತಿದ್ದ ವೇಳೆ ಡಾ.ರಕ್ಷಿತ್ ರೆಡ್ಡಿ ಅವರ ಕಾರು ಪಂಕ್ಚರ್ ಆಗಿದ್ದು, ಚಕ್ರ ಬದಲಿಸುತ್ತಿದ್ದಾಗ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.