ಬೆಂಗಳೂರು-ಮೈಸೂರು ದಶಪಥ ರಸ್ತೆ ಲೋಕಾರ್ಪಣೆ

ಬೆಂಗಳೂರು,ಮಾ.೧೨:ಬೆಂಗಳೂರು-ಮೈಸೂರು ದಶಪಥ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು.
ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಈ ದಶಪಥ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.
ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸೇರಿದಂತೆ ಹಲವು ಗಣ್ಯರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮಂಡ್ಯದಲ್ಲಿ ರೋಡ್ ಶೋ ಮುಗಿಸಿಕೊಂಡು ದಶಪಥ ರಸ್ತೆ ಉದ್ಘಾಟನೆಯ ವೇದಿಕೆ ಕಾರ್ಯಕ್ರಮಕ್ಕೆ ಗೆಜ್ಜಲಗೆರೆಗೆ ಆಗಮಿಸಿದ ಪ್ರಧಾನಿಗಳು, ರಸ್ತೆಯ ಒಂದು ಬದಿಯಲ್ಲಿ ನಿಂತಿದ್ದ ಜಾನಪದ ಕಲಾ ತಂಡಗಳತ್ತ ತೆರಳಿ ಅವರತ್ತ ಕೈ ಬೀಸಿ ಹರ್ಷ ವ್ಯಕ್ತಪಡಿಸಿದರು. ಪ್ರಧಾನಿಗಳು ತಮ್ಮ ಬಳಿ ಬರುತ್ತಿದ್ದಂತೆಯೇ ಜಾಲಪದ ಕಲಾವಿದರು ಡೋಲು ಬಾರಿಸಿ ಕುಣಿದು ಕುಪ್ಪಳಿಸಿ ತಮ್ಮ ಕಲಾ ವೈಭವವನ್ನು ಪ್ರದರ್ಶಿಸಿದರು. ಕೆಲಹೊತ್ತು ಪ್ರಧಾನಿಗಳು ಈ ಕಲಾ ಪ್ರದರ್ಶನವನ್ನು ವೀಕ್ಷಿಸಿ ಸಂತಸದಿಂದ ತಲೆದೂಗಿದರು.
ಹೆದ್ದಾರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿಯವರಿಗೆ ಬಿಜೆಪಿಗೆ ಬೆಂಬಲ ನೀಡಿರುವ ಸಂಸದೆ ಸುಮಲತಾ ಅಂಬರೀಷ್ ಸಾವಯವ ಬೆಲ್ಲ ನೀಡಿ ಸ್ವಾಗತಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯವರಿಗೆ ಹಸಿರು ಶಾಲು ಹೊದಿಸಿ, ಮೈಸೂರು ಪೇಟ ಧರಿಸಿ, ಮಲ್ಲಿಗೆ ಹಾರ ಹಾಕಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಸಚಿವರುಗಳಾದ ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ನಾರಾಯಣ ಗೌಡ, ಸಂಸದ ಪ್ರತಾಪಸಿಂಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹೆದ್ದಾರಿ ವಿಶೇಷ
ರಾಜ್ಯದ ಮೊದಲ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ವೇ ಎಂಬ ಖ್ಯಾತಿಯ ೧೦ ಪಥಗಳ ಈ ಹೆದ್ದಾರಿಯನ್ನು ೮,೪೪೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಹೆದ್ದಾರಿ ಒಟ್ಟು ೧೧೮ ಕಿ.ಮೀ ಉದ್ದವಿದೆ.
ಈ ಹೆದ್ದಾರಿಯಿಂದ ಮೈಸೂರು ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದ್ದು, ಈ ಭಾಗದ ಸಾಮಾಜಿಕ, ಆರ್ಥಿಕಾಭಿವೃದ್ಧಿಗೆ ಈ ಹೆದ್ದಾರಿ ವೇಗವರ್ಧಕವಾಗಲಿದೆ.
ಬೆಂಗಳೂರು-ಮೈಸೂರು ದಶಪತ ಹೆದ್ದಾರಿಯಿಂದ ಬೆಂಗಳೂರು-ಮೈಸೂರು ಪ್ರಯಾಣದ ಅವಧಿ ೩ ಗಂಟೆಯಿಂದ ೯೦ ನಿಮಿಷಕ್ಕೆ ಇಳಿಕೆಯಾಗಲಿದೆ.
ಈ ಹೆದ್ದಾರಿಗೆ ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದ್ದು, ೫೨ ಕಿ.ಮೀ ಉದ್ದದ ಬೈಪಾಸ್ ರಸ್ತೆಯನ್ನೂ ಈ ಹೆದ್ದಾರಿ ಒಳಗೊಂಡಿದೆ. ಈ ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಇಳಿಯಲೂ ವ್ಯವಸ್ಥೆ ಇದೆ. ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳಿಗೆ ಎಕ್ಸ್‌ಪ್ರೆಸ್ ವೇ ನಲ್ಲಿ ನಿರ್ಬಂಧ ಹೇರಲಾಗಿದೆ. ಎಕ್ಸ್‌ಪ್ರೆಸ್ ವೇ ನ ಎರಡೂ ಬದಿ ೭ ಅಡಿ ಎತ್ತರದ ತಂತಿ ಬೇಲಿ ನಿರ್ಮಿಸಲಾಗಿದೆ.
ರಸ್ತೆ ಲೋಕಾರ್ಪಣಾ ಸಮಾವೇಶಕ್ಕೆ ಸಾವಿರಾರು ಮಂದಿ ಭಾಗಿಯಾಗಿದ್ದು, ಮಂಡ್ಯ ಜಿಲ್ಲೆಯಷ್ಟೇ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಈ ಕಾರ್ಯಕ್ರಮದಕ್ಕೆ ಜನರನ್ನು ಕರೆತರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಊಟೋಪಚಾರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎಲ್ಲರಿಗೂ ಪಲಾವ್, ಮೊಸರನ್ನ, ಪಾಯಸ, ಕೇಸರಿಬಾತ್, ಉಪ್ಪಿಟ್ಟು ನೀಡಲಾಯಿತು.

೪೪ ವರ್ಷಗಳ ಬಳಿಕ ಮಂಡ್ಯಗೆ ಪ್ರಧಾನಿ ಭೇಟಿ
ಮಂಡ್ಯ ಜಿಲ್ಲೆಗೆ ೪೪ ವರ್ಷಗಳ ಬಳಿಕ ಪ್ರಧಾನಿಗಳು ಭೇಟಿ ನೀಡುತ್ತಿರುವುದು ವಿಶೇಷ. ಈ ಹಿಂದೆ ೧೯೭೯ರಲ್ಲಿ ಪ್ರಧಾನಿಗಳು ಮಂಡ್ಯಕ್ಕೆ ಭೇಟಿ ನೀಡಿದ ನಂತರ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.
ಮೊದಲಿಗೆ ಮಂಡ್ಯಗೆ ೧೯೬೨ರಲ್ಲಿ ಆಗಿನ ಪ್ರಧಾನಿ ಜವಹರಲಾಲ್ ನೆಹರು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ನ ಶಿವನಂಜಪ್ಪ ಪರ ಮತ ಕೇಳಲು ಬಂದಿದ್ದರು. ಅದಾದ ಬಳಿಕ ೧೯೭೭ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸಿದ್ದ ಚಿಕ್ಕಲಿಂಗಯ್ಯ ಪರ ಮಂಡ್ಯಗೆ ಬಂದಿದ್ದರು. ೧೯೭೯ರಲ್ಲಿ ಚರಣ್‌ಸಿಂಗ್‌ರವರು ದೇವರಾಜ ಅರಸ್‌ರವರ ನಾಗರೀಕ ಸನ್ಮಾನ ಕಾರ್ಯಕ್ರಮಕ್ಕೆ ಮಂಡ್ಯಗೆ ಆಗಮಿಸಿದ್ದರು. ಇದಾದ ಬಳಿಕ ಇಂದು ಪ್ರಧಾನಿ ಮೋದಿ ಮಂಡ್ಯಗೆ ಬಂದಿದ್ದಾರೆ.
ನರೇಂದ್ರಮೋದಿ ಅವರು ಈ ಹಿಂದೆ ೨೦೦೪ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಾಗಿ ಮಂಡ್ಯಗೆ ಭೇಟಿ ನೀಡಿದ್ದರು.