ನಿಲ್ಲದ ಮಳೆ: ವಿದ್ಯುತ್ ಸ್ಪರ್ಶಕ್ಕೆ ಯುವತಿ ಬಲಿ

ಬೆಂಗಳೂರು, ಸೆ. ೬- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ವರುಣನ ಭೋರ್ಗರೆತಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಈ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸಿದ್ದಾಪುರದಲ್ಲಿ ಸಂಭವಿಸಿದೆ.
ಬೆಂಗಳೂರಿನಲ್ಲಿ ಇನ್ನೂ ೨ ದಿನ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ರಾತ್ರಿಯು ಸುರಿದ ಭಾರಿ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಮೃತ ಯುವತಿಯನ್ನು ಅಖಿಲಾ (೨೩) ಎಂದು ಗುರುತಿಸಲಾಗಿದೆ. ಬಿಕಾಂ ಪದವೀಧರೆಯಾಗಿದ್ದ ಈಕೆ ಖಾಸಗಿ ಶಾಲೆಯೊಂದರಲ್ಲಿ ಆಡಳಿತ ವಿಭಾಗದಲ್ಲಿ ಕಳೆದ ೨ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಈಕೆ ತಂದೆ-ತಾಯಿ ಜತೆಗೆ ಸಿದ್ದಾಪುರ ಮನೆಯಲ್ಲಿ ವಾಸವಾಗಿದ್ದರು.
ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದ ವೇಳೆ ಸಿದ್ದಾಪುರ ಬಳಿ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ೨ ಅಡಿ ನೀರು ನಿಂತಿದ್ದು, ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಅಖಿಲಾ ಬರುತ್ತಿರುವ ವೇಳೆ ನೀರಿನ ರಭಸ ಹೆಚ್ಚಾಗಿದ್ದರಿಂದ ವಾಹನ ಆಫ್ ಆಯಿತು. ಕೆಳಗೆ ಬೀಳುತ್ತಿದ್ದ ಅಖಲಾ ಸಹಾಯಕ್ಕಾಗಿ ಬಲಭಾಗದಲ್ಲಿದ್ದ ವಿದ್ಯುತ್ ಕಂಬವನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ. ಬಳಿಕ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಿಸದೆ ಅಖಿಲಾ ಅಸುನೀಗಿದ್ದಾರೆ.
ಬೆಸ್ಕಾಂ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಮಾಡದಿರುವುದೇ ಅಖಿಲಾ ಅವರ ಸಾವಿಗೆ ಕಾರಣವಾಗಿದೆ ಎಂದು ಕುಟುಂಬ ಸದಸ್ಯರು ಆಕ್ರೋಶಕ್ಕೆ ಒಳಗಾಗಿದ್ದಾರೆ.
ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.
ಕಾಡಿಗೋಡಿ, ಸರ್ಜಾಪುರ, ಯಮಲೂರು, ಬೆಳ್ಳಂದೂರು ಇನ್ನಿತರ ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೊಂಟದುದ್ದ ನೀರು ನಿಂತಿದ್ದು, ಜನರು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಟ್ರಾಕ್ಟರ್‌ನಲ್ಲಿ ಸಂಚರಿಸುವ ದೃಶ್ಯ ಕಂಡು ಬಂದಿದೆ. ರೈನ್ ಬೋ ಲೇಔಟ್, ಸಾಯಿ ಬಡಾವಣೆ ಸೇರಿದಂತೆ ಇತರ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ಜನರ ಪರದಾಡುವಂತಾಗಿದೆ.
ಮಹಾಮಳೆಯ ರೌದ್ರಾವತಾರಕ್ಕೆ ಬೆಂಗಳೂರು ನಗರ ನಡುಗಡ್ಡೆಯಂತಾಗಿದ್ದು, ರಸ್ತೆ ರಸ್ತೆಗಳು ಜಲಾವೃತಗೊಂಡಿವೆ. ಸರ್ಜಾಪುರ, ಬೆಳ್ಳಂದೂರು, ಮಾರತ್‌ಹಳ್ಳಿ, ಔಟರ್ ರಿಂಗ್‌ರೋಡ್‌ಗಳಲ್ಲಿ ನೀರು ನಿಂತಿದ್ದು, ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಹೀಗಾಗಿ ಬಹುತೇಕ ಭಾಗಗಳಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. ಮಾರತ್‌ಹಳ್ಳಿ, ಸಿಲ್ಕ್‌ಬೋರ್ಡ್ ಸಂಪೂರ್ಣ eಲಾವೃತವಾಗಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಇನ್ನೂ ೪ ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕನ್ಯಾಕುಮಾರಿಯಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ನೈರುತ್ಯ ಮುಂಗಾರು ಚುರುಕಾಗಿದೆ. ಬೆಂಗಳೂರು ನಗರ, ಬೆಂಗಳೂರು, ಗ್ರಾಮಾಂತರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾಸನ. ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬಳ್ಳಾರಿಯಲ್ಲಿ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.