ಬೆಂಗಳೂರು ಬವಣೆಗೆ ‘ಕೈ’ ಹೊಣೆ:ಸಿಎಂ ಕಿಡಿ

ಬೆಂಗಳೂರು,ಸೆ.೬- ಭಾರಿ ಮಳೆಗೆ ತತ್ತರಿಸಿರುವ ಬೆಂಗಳೂರಿನ ಇವತ್ತಿನ ಪರಿಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತ ಕಾರಣ, ಕಾಂಗ್ರೆಸ್‌ನ ದುರಾಡಳಿತದಿಂದ ಬೆಂಗಳೂರು ಇಂದು ತೊಂದರೆಗೆ ಸಿಲುಕುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಇವತ್ತಿನ ಪರಿಸ್ಥಿತಿಯನ್ನು ಸರಿಪಡಿಸುವ ಸವಾಲನ್ನು ಬಿಜೆಪಿ ಸರ್ಕಾರ ಸ್ವೀಕರಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಮಳೆಯಿಂದ ತೊಂದರೆಗೆ ಸಿಲುಕದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈಗಾಗಲೇ ಹೆಚ್ಚುವರಿಯಾಗಿ ೩೦೦ ಕೋಟಿ ರೂ,ಗಳನ್ನು ಬೆಂಗಳೂರಿನ ಮಳೆ ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಮನಸೋಯಿಚ್ಛೆ ಯೋಜನೆಗಳು, ಅವೈಜ್ಞಾನಿಕವಾಗಿ ಕೆರೆ, ಕೆರೆಯಂಗಳ, ತಗ್ಗು ಪ್ರದೇಶಗಳು, ಬಫರ್‌ಜೋನ್‌ಗಳಲ್ಲಿ ಕಟ್ಟಡ ನಿರ್ಮಾಣಗಳಿಗೆ ಅನುಮತಿ ನೀಡಿದ್ದರ ಫಲಿತಾಂಶ ಇಂದು ಬೆಂಗಳೂರಿನ ಒಂದು ಭಾಗ ಮಳೆಯಿಂದ ಮುಳುಗುವಂತಾಗಿದೆ ಎಂದು ಹರಿಹಾಯ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಮಾಣ ಕಟ್ಟಡಗಳಿಗೆ ಮಂಜೂರಾತಿ ನೀಡುವಾಗ ಯೋಜಿತವಲ್ಲದ ರೀತಿಯಲ್ಲಿ ತೀರ್ಮಾನಗಳನ್ನು ಕೈಗೊಂಡಿದ್ದು, ಬೆಂಗಳೂರಿನ ದುಃಸ್ಥಿತಿ ಕಾರಣವಾಗಿದೆ ಎಂದರು.
ಇಡೀ ಬೆಂಗಳೂರು ತೊಂದರೆಗೆ ಸಿಲುಕಿದೆ ಎಂಬ ಚಿತ್ರಣ ಕೊಡುತ್ತಿರುವುದು ಸರಿಯಲ್ಲ. ಎರಡು ವಲಯಗಳು ಅದರಲ್ಲೂ ಮಹದೇವಪುರ ವಲಯ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದ ತೊಂದರೆಯಾಗಿದೆ. ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಡೆಸಿದ್ದೇವೆ. ಹಲವೆಡೆ ನೀರನ್ನು ಹೊರ ತೆಗೆಯಲಾಗಿದೆ. ಬೀಳುತ್ತಿರುವ ಮಳೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಅದರೂ, ಎಲ್ಲ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಮಳೆ ಪರಿಹಾರ ಕಾರ್ಯಗಳನ್ನು ನಡೆಸಲಾಗಿದೆ ಎಂದರು.
ತಗ್ಗು ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣ, ರಾಜಕಾಲುವೆಗಳ ಒತ್ತುವರಿ ಹಾಗೂ ಮಹದೇವಪುರ ವಲಯದಲ್ಲಿ ೬೯ ಕೆರೆಗಳು ತುಂಬಿ ಕೋಡಿ ಬಿದ್ದಿರುವುದು ತೊಂದರೆಗಳಿಗೆ ಕಾರಣವಾಗಿದೆ ಎಂದರು. ಈಗಾಗಲೇ ಮಳೆ ಪರಿಹಾರ ಕಾರ್ಯಗಳಿಗೆ ೫೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೆ. ನಿನ್ನೆಯಷ್ಟೇ ೩೦೦ ಕೋಟಿ ರೂ.ಗಳನ್ನು ಮತ್ತೆ ಬಿಡುಗಡೆ ಮಾಡಿದ್ದೇನೆ. ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಯಾವುದೇ ಮಳೆಯಿಂದ ಬೆಂಗಳೂರು ತೊಂದರೆಗೆ ಸಿಲುಕದಂತೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಗೇಟ್ ಅಳವಡಿಕೆ
ಬೆಂಗಳೂರಿನಲ್ಲಿ ಕಳೆದ ೯೦ ವರ್ಷಗಳಲ್ಲಿ ಆಗದ ಭಾರಿ ಮಳೆಯಾಗಿದೆ. ಇನ್ನು ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್‌ಗಳನ್ನು ಅಳವಡಿಸಲು ತೀರ್ಮಾನ ಮಾಡಲಾಗಿದೆ. ಇದರಿಂದ ಕೆರೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಕೆಲವು ಪ್ರದೇಶಗಳಲ್ಲಿ ಒತ್ತುವರಿ ಮಾಡಿ ಕಾಂಪೌಂಡ್ ಕಟ್ಟಡಗಳನ್ನು ಕಟ್ಟಿದ್ದಾರೆ. ಇದರಿಂದ ರಸ್ತೆಯ ಮೇಲೆ ನೀರು ನಿಲ್ಲುವ ಪರಿಸ್ಥಿತಿ ಬಂದಿದೆ. ಅವುಗಳನ್ನು ತೆರವು ಮಾಡಲು ಸೂಚಿಸಿದ್ದೇನೆ ಎಂದರು.
ಸಮರ್ಪಕ ಕುಡಿಯುವ ನೀರು
ಮಳೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಜಲಮಂಡಳಿಯ ತೊರೆಕಾಡಲಹಳ್ಳಿ ಪಂಪ್ ಸ್ಟೇಷನ್ ಜಲಾವೃತಗೊಂಡಿದ್ದು, ನೀರನ್ನು ತೆರವುಗೊಳಿಸುವ ಕಾರ್ಯ ನಡೆದಿದ್ದು, ಇಂದು ಸಂಜೆಯ ವೇಳೆಗೆ ೫೫೦ ಎಂಎಲ್‌ಡಿ ನೀರು ಸಾಮರ್ಥ್ಯದ ಪಂಪ್‌ಹೌಸ್ ಕೆಸ ಆರಂಭಿಸಲಿದೆ. ಇನ್ನೆರೆಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಂಪ್‌ಹೌಸ್ ಕೆಲಸ ಮಾಡುತ್ತದೆ ಎಂದರು.
ಟಿಕೆ ಹಳ್ಳಿ ಪಂಪ್‌ಹೌಸ್‌ನ ತೊಂದರೆಯಿಂದ ಬೆಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ ಸರ್ಕಾರ ಪರ್ಯಾಯ ಕಾರ್ಯಗಳನ್ನು ಕೈಗೊಂಡಿದೆ. ಜಲಮಂಡಳಿ ಅಧೀನದಲ್ಲಿರುವ ೮ ಸಾವಿರ ಬೋರ್‌ವೆಲ್‌ಗಳಿಂದ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಬೋರ್‌ವೆಲ್ ನೀರು ಸರಬರಾಜು ಆಗದ ಕಡೆಗಳಲ್ಲಿ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುವುದು. ಇನ್ನು ೨-೩ ದಿನ ಬೆಂಗಳೂರಿನ ಜನತೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯಕ್ಕೆ ಕೇಂದ್ರದ ತಂಡ
ರಾಜ್ಯದ ಮಳೆ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದ ಅಧ್ಯಯನ ತಂಡ ಇಂದು ರಾತ್ರಿ ನಗರಕ್ಕೆ ಆಗಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ೪ ತಿಂಗಳಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಆಗಿರುವ ಹಾನಿಯನ್ನು ಅಧ್ಯಯನ ಮಾಡಲು ಕೇಂದ್ರ ತಂಡ ಆಗಮಿಸುತ್ತಿದ್ದು, ನಾಳೆ ಕೇಂದ್ರ ತಂಡದ ಜತೆ ಬೆಂಗಳೂರಿನಲ್ಲಿ ಆಗಿರುವ ಮಳೆ ಹಾನಿ ಸೇರಿದಂತೆ ರಾಜ್ಯದ ಮಳೆ ಹಾನಿ ಬಗ್ಗೆ ಕೇಂದ್ರ ಅಧ್ಯಯನ ತಂಡಕ್ಕೆ ಎಲ್ಲ ಮಾಹಿತಿಯನ್ನು ನೀಡಿ ಕೇಂದ್ರದ ನೆರವಿಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರದಿಂದ ಮೂರು ತಂಡಗಳು ಆಗಮಿಸಲಿದ್ದು, ಈ ಮೂರು ತಂಡಗಳು ಮಳೆಯಿಂದ ತೊಂದರೆಗೊಳಗಾಗಿರುವ ಜಿಲ್ಲೆಗಳಲ್ಲಿ ನಾಳೆಯಿಂದ ಪ್ರವಾಸ ನಡೆಸಲಿವೆ.