ಬೆಂಗಳೂರು ಬಂದ್‌ ಗೆ ಅನುಮತಿಯಿಲ್ಲ ; ಇಂದು ಮಧ್ಯರಾತ್ರಿಯಿಂದ ನಿಷೇದಾಜ್ಞೆ ಜಾರಿ

ಬೆಂಗಳೂರು,ಸೆ.25-ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕರೆ ನೀಡಿರುವ ಬೆಂಗಳೂರಿನಲ್ಲಿ ಬಂದ್‌ ಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಕಾನೂನು ಬಾಹಿರವಾಗಿ ಬಂದ್ ಮಾಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಬಂದ್‌ ರ್ಯಾಲಿಗಳಿಗೆ ನಾಳೆ ಅವಕಾಶ ಇಲ್ಲ,ಇಂದು‌ ಮಧ್ಯರಾತ್ರಿ 12ರಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತದೆ, ಒತ್ತಾಯವಾಗಿ ಬಂದ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸ್ವಯಂಪ್ರೇರಿತವಾಗಿ ಬಂದ್‌ ಮಾಡುವವರಿಗೆ ಪರಿಸ್ಥಿತಿ ನೋಡಿಕೊಂಡು ಕ್ರಮ ಜರುಗಿಸಲಾಗುವುದು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂದರು.
ಜಾಥಾಗೆ ಅನುಮತಿ:
ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್‌ವರೆಗೂ ರ್ಯಾಲಿ ಮಾಡಲು ವಿವಿಧ ಸಂಘಟನೆಗಳು ಅರ್ಜಿ ನೀಡಿದ್ದಾರೆ. ಆದರೆ, ಈಗಾಗಲೇ ನಗರದಲ್ಲಿ ಬಂದ್ ಅಥವಾ ಇತರೆ ರ್ಯಾಲಿಗೆ ಅವಕಾಶ ಇಲ್ಲ. ಈ ಬಗ್ಗೆ ನ್ಯಾಯಾಲಯದ ಅದೇಶವೂ ಇದೆ ಎಂದು ಆಯುಕ್ತರು ತಿಳಿಸಿದರು.
ತಮಿಳುನಾಡು ಬಸ್ ಓಡಾಟದ ಬಗ್ಗೆ ನಾವು ಏನೂ ಸೂಚಿಸಿಲ್ಲ. ಅದು ಆಯಾ ಸಾರಿಗೆ ಸಂಸ್ಥೆ ವಿವೇಚನೆಗೆ ಬಿಟ್ಟದ್ದು ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.
ಇನ್ನು ಬಂದ್‌ ಹಿನ್ನೆಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬರುವ ಬಸ್‌ಗಳ ಸಂಖ್ಯೆ ತಗ್ಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.ಬಂದ್‌ ಯಾಕೆ?ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸಂಘಟನೆಗಳು ‘ಬೆಂಗಳೂರು ಬಂದ್‌’ ನಡೆಸಲು ಮುಂದಾಗಿದೆ.
ಇತ್ತ ಬಂದ್‌ಗೆ ಕೆಲ ಸಂಘಟನೆಗಳು ಕೈಜೋಡಿಸಿದರೆ ಇನ್ನೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಂದ್‌ ಹಿನ್ನೆಲೆ ನಿಷೇಧಾಜ್ಞೆಯನ್ನು ಕೈಗೊಳ್ಳಲಾಗಿದೆ.