ಬೆಂಗಳೂರು ಪ್ರತಿಷ್ಠೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸೋಣ: ಡಿಸಿಎಂ

ಬೆಂಗಳೂರು.ಮಾ.20- ಕೇಂದ್ರದ ನಗರಾಭಿವೃದ್ದಿ ಇಲಾಖೆ ಪ್ರಕಟಿಸಿರುವ ʼಸುಲಲಿತ ಜೀವನ ನಿರ್ವಹಣೆ ಸೂಚ್ಯಂಕʼದಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಳೂರು ನಗರದ ಪ್ರತಿಷ್ಠೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ

ಬೆಂಗಳೂರು ಜಾಗತಿಕ ಮಟ್ಟದಲ್ಲಿ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಬೆಳೆಯುತ್ತಿರುವ ನಗರ. ಹೀಗಾಗಿ ಬೆಂಗಳೂರಿನ ಬಗ್ಗೆ ಪ್ರತಿಯೊಬ್ಬರೂ ಆಸಕ್ತಿಯಿಂದ ವೈಜ್ಞಾನಿಕವಾಗಿ ಕೆಲಸ ಮಾಡಬೇಕು” ಎಂದರು.

ಇನ್ಸಿಟ್ಯೂಟ್‌ ಆಫ್‌ ಅರ್ಬನ್‌ ಡಿಸೈನರ್ಸ್‌ ಸಂಸ್ಥೆ ಆಯೋಜಿಸಿದ್ದ ʼಸಿಟಿ ಫ್ಯೂಚರ್ಸ್‌ʼ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಗರವೆಂದಾಕ್ಷಣ ಅಥವಾ ಕಟ್ಟಡ ಎಂದಾಕ್ಷಣ ಯಾವುದೇ ಪೂರ್ವಸಿದ್ಧತೆ ಇಲ್ಲ ಎಂದರೆ ನಿರುಪಯುಕ್ತ. ಈ ಆಧುನಿಕ ಕಾಲದಲ್ಲಿ ಸರಕಾರ ಇರಲಿ ಅಥವಾ ಖಾಸಗಿ ಕ್ಷೇತ್ರ ಇರಲಿ, ಎಲ್ಲೇ ಆದರೂ ವಿನ್ಯಾಸಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜಿತವಾದ ವಿನ್ಯಾಸ, ಪರಿಕಲ್ಪನೆ ಅತ್ಯಂತ ಅಗತ್ಯ ಎಂದರು

ಮಲ್ಲೇಶ್ವರ ಕ್ಷೇತ್ರದಲ್ಲಿ ಕೈಗೊಂಡಿರುವ ಯಾವುದೇ ನಿರ್ಮಾಣ ಕಾಮಗಾರಿ ಇದ್ದರೂ ಆದಕ್ಕೆ ನಿರ್ದಿಷ್ಟ ವಿನ್ಯಾಸವನ್ನು ರೂಪಿಸುವ ಪರಿಪಾಠವಿದೆ. ಗುಣಮಟ್ಟದ ಜತೆಗೆ, ನೋಡುಗರಿಗೆ ಚೆನ್ನಾಗಿಯೂ ಕಾಣಬೇಕು. ಈ ನಿಟ್ಟಿನಲ್ಲಿ ವಿನ್ಯಾಸಕ್ಕೆ ಉತ್ತೇಜನ ನೀಡಬೇಕಾಗಿದೆ ಎಂದರು.