ಬೆಂಗಳೂರು ನಗರ ವಿವಿ ಸಿಂಡಿಕೇಟ್‌ಗೆ ಸದಸ್ಯರಾಗಿ ಎಂ.ವಿ.ರಂಗಪ್ಪ ನೇಮಕ

ಕೋಲಾರ,ಡಿ.೯: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಕೋಲಾರ ತಾಲ್ಲೂಕಿನ ಹೂವಳ್ಳಿಯ ಎಂ.ವಿ.ರಂಗಪ್ಪ ಬಿನ್ ವೆಂಕಟೇಶಪ್ಪ ಅವರನ್ನು ನೇಮಿಸಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಆದೇಶ ಹೊರಡಿಸಿದ್ದು, ವಿವಿಯ ಕುಲಪತಿಗಳಾದ ಲಿಂಗರಾಜು ಗಾಂಧಿ ಹೂಗುಚ್ಚ ನೀಡಿ ಅಭಿನಂದಿಸಿದರು.
ರಂಗಪ್ಪ ಅವರು ಈವರೆಗೂ ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ವಿವಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ವಿವಿಯ ಅಭಿವೃದ್ದಿಗೆ ಶ್ರಮಿಸಿದ್ದರು.
ಇದೀಗ ರಾಜ್ಯಪಾಲರು ಅವರನ್ನು ಬೆಂಗಳೂರು ನಗರ ವಿವಿ ಸಿಂಡಿಕೇಟ್ ಪ್ರಾಧಿಕಾರಕ್ಕೆ ನೇಮಿಸಿದ್ದು, ಈ ಸಂಬಂಧ ರಾಜ್ಯಪಾಲರ ಆದೇಶವನ್ನು ಆಧರಿಸಿ ವಿವಿಯ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.
ನಗರ ವಿವಿ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿವಿಯ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.