ಬೆಂಗಳೂರು ತೊರೆಯುವುದಾಗಿ ಐಟಿ-ಬಿಟಿ ಎಚ್ಚರಿಕೆ, ಸಿಎಂಗೆ ಪತ್ರ

ಬೆಂಗಳೂರು, ಆ.3-ಇತ್ತೀಚೆಗೆ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬ್ರಾಂಡ್ ಬೆಂಗಳೂರು ಹೆಸರು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳು ಬೆಂಗಳೂರು ತೊರೆಯುವುದಾಗಿ ಸರ್ಕಾರಕ್ಕೆ ವರದಿ ಎಚ್ಚರಿಕೆ ನೀಡಿವೆ.
ಈ ಎಚ್ಚರಿಕೆ ಬೆನ್ನಲ್ಲೇ ಮುಂದಿನವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದಾರೆ.
ಈ ಸಂಬಂಧ ಹೊರವರ್ತುಲ ರಸ್ತೆ ಕಂಪನಿಗಳ ಅಸೋಸಿಯೇಷನ್ ಖುದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
ಕಳೆದ ವಾರ 3-4 ದಿನಗಳಿಂದ ಸುರಿದ ಮಹಾಮಳೆಗೆ ಐಟಿ ಕಂಪನಿಗಳು ಭಾರೀ ನಷ್ಟ ಅನುಭವಿಸಿವೆ. ಮಳೆಯಿಂದಾಗಿ 5 ಗಂಟೆ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು. ಐಟಿ ಕಂಪನಿಗಳ ಒಳಭಾಗಕ್ಕೆಲ್ಲಾ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು.
ಇದರಿಂದಾಗಿ 255 ಕೋಟಿ ರೂ ನಷ್ಟವಾಗಿದೆ. ಇದಕ್ಕೆ ಹೊರವರ್ತುಲ ರಸ್ತೆಯ ಕಳಪೆ ಕಾಮಗಾರಿ ನಿರ್ವಹಣೆ ಮೂಲ ಸೌಕರ್ಯಗಳ ಕೊರತೆ, ಮಳೆ ಬಂದಾಗ ಆಗುವ ಅವಾಂತರದಿಂದ ಕಂಪನಿಗಳಿಗೆ ಭಾರೀ ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮವೇನು ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿವೆ ಎಂದು ಪ್ರಶ್ನಿಸಿದ್ದು ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತದೆ. ಜೊತೆಗೆ ತಮ್ಮ ಹೂಡಿಕೆಗಳನ್ನು ವಾಪಸ್ ಪಡೆಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.