ಬೆಂಗಳೂರು : ಖುದ್ಧಾಗಿ ಖಾಸಗಿ ಕಾರಿನಲ್ಲಿ ಔಷಧಿ ರವಾನೆ

ಬ್ಲ್ಯಾಕ್ ಫಂಗಸ್ : ಶಾಸಕರ ಪ್ರಯತ್ನ – ೮೧೦ ಇಂಜಕ್ಷನ್ ಜಿಲ್ಲೆಗೆ

  • ರಾಯಚೂರು.ಜೂ.೧೧- ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆಗಾಗಿ ಎಂಪೋಟೇರಿಸಿನ್ ಬಿ ಇಂಜಕ್ಷನ್ ಹಾಗೂ ಔಷಧಿಗಳನ್ನು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಬೆಂಗಳೂರಿನ ಉಗ್ರಾಣಕ್ಕೆ ತೆರಳಿ, ಖಾಸಗಿ ಕಾರುವೊಂದರಲ್ಲಿ ಜಿಲ್ಲೆಗೆ ರವಾನಿಸಿದ ಅಪರೂಪದ ಘಟನೆ ನಡೆಯಿತು.
    ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಔಷಧಿ ಕೊರತೆಯಾಗಬಾರದೆಂಬ ಉದ್ದೇಶದಿಂದ ಸ್ವತಃ ಬೆಂಗಳೂರಿಗೆ ತೆರಳಿದ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮಾಡಿ, ನೇರವಾಗಿ ಉಗ್ರಾಣಕ್ಕೆ ತೆರಳಿ, ೬೫೦ ಎಂಪೋಟೇರಿಸಿನ್ ಬಿ ಇಂಜಕ್ಷನ್ ಮತ್ತು ೪೫೦ ಮಾತ್ರೆಗಳನ್ನು ಜಿಲ್ಲೆಗೆ ರವಾನಿಸಿದ್ದಾರೆ. ನಿನ್ನೆ ಸಂಜೆ ೧೬೦ ಇಂಜಕ್ಷನ್ ಮತ್ತು ೮೦ ಮಾತ್ರೆಗಳನ್ನು ಜಿಲ್ಲೆಗೆ ಕಳುಹಿಸಿದ್ದರು. ಶಾಸಕರು ೧೨ ಘಂಟೆಗಳಲ್ಲಿ ೮೧೦ ಎಂಪೋಟೇರಿಸಿನ್ ಬಿ ಇಂಜಕ್ಷನ್ ಹಾಗೂ ೫೩೦ ಮಾತ್ರೆಗಳನ್ನು ಚಿಕಿತ್ಸೆಗೆ ದೊರೆಯುವಂತೆ ಮಾಡುವಲ್ಲಿ ಕಾಳಜಿ ವಹಿಸಿದ್ದರು.
    ಜಿಲ್ಲೆಯಲ್ಲಿ ಒಟ್ಟು ೫೮ ಸೋಂಕಿತರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರಿಗೆ ಕನಿಷ್ಟ ೭ ರಿಂದ ೧೦ ಇಂಜಕ್ಷನ್ ಅಗತ್ಯವಿದೆ. ಇಂಜಕ್ಷನ್ ಕೊರತೆ ಸೋಂಕಿತರಿಗೆ ತೀವ್ರ ಸಮಸ್ಯೆಯಾಗಿತ್ತು. ಈ ಬಗ್ಗೆ ಮನವರಿಕೆ ಮಾಡಿಕೊಂಡ ಶಾಸಕರು ನೇರವಾಗಿ ಬೆಂಗಳೂರಿಗೆ ತೆರಳಿ ಉಗ್ರಾಣದಲ್ಲಿರುವ ಇಂಜಕ್ಷನ್‌ಗಳನ್ನು ತಾವೇ ಖುದ್ಧಾಗಿ ಮುಂದೆ ನಿಂತು ವಿಳಂಬವಾಗದಂತೆ ಖಾಸಗಿ ಕಾರಿನಲ್ಲಿ ಇವುಗಳನ್ನು ಜಿಲ್ಲೆಗೆ ರವಾನಿಸುವ ಮೂಲಕ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿರುವ ಸೋಂಕಿತರಿಗೆ ನೆರವಾಗಿದ್ದಾರೆ.