ಬೆಂಗಳೂರು ಕೃಷಿ ವಿವಿಗೆ 11ನೇ ಸ್ಥಾನ

ಬೆಂಗಳೂರು,ಜೂ.೭-ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕದ ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾನಿಲಯಗಳ ಪೈಕಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ದೇಶದ ೧೦೭ ಅಖಿಲ ಭಾರತ ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳ ಪೈಕಿ, ೧೧ನೇ ಸ್ಥಾನವನ್ನು ಪಡೆದಿದೆ. ವಿಶ್ವವಿದ್ಯಾನಿಲಯವು ದೇಶದ ೧೦೦ ಅತ್ಯುನ್ನತ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದ್ದು, ಕರ್ನಾಟಕದ ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪೈಕಿ ೧೦ನೇ ಸ್ಥಾನದಲ್ಲಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶ ಸಂತಸ ವ್ಯಕ್ತಪಡಿಸಿದರು.
ಐದು ವರ್ಷಗಳ ಹಿಂದಿನ ಮಾಹಿತಿಯನ್ನು ಪರಿಗಣಿಸಿ, ಬೋಧನೆ, ಕಲಿಕೆ & ಸ೦ಪನ್ಮೂಲಗಳು; ಸಂಶೋಧನೆ & ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು ಹೊರಸೇರುವಿಕೆ & ಒಳಗೊಳ್ಳುವಿಕೆ ಮತ್ತು ಗ್ರಹಿಕೆ ಎಂಬ ಐದು ಮಾನದಂಡಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯಗಳಿಗೆ ಶ್ರೇಯಾಂಕವನ್ನು ನೀಡಲಾಗಿದೆ.
ಗೌರವಾನ್ವಿತ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ರವರು ೦೫ನೇ ಜೂನ್ ೨೦೨೩ ರಂದು ನವದೆಹಲಿಯಲ್ಲಿ “ಭಾರತ ಶ್ರೇಯಾಂಕಗಳು ೨೦೨೩ರನ್ನು” ಬಿಡುಗಡೆ ಮಾಡಿದರು.