ಬೆಂಗಳೂರು ಕರಗ ಸದ್ಯದಲ್ಲಿ ನಿರ್ಧಾರ


ಬೆಂಗಳೂರು, ಏ.೫- ನಗರದ ಐತಿಹಾಸಿಕ ಕರಗ ಮಹೋತ್ಸವ ಎಂದಿನಂತೆ ಈ ವರ್ಷವೂ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲು ‘ಉತ್ಸವ ಸಮಿತಿ’ ರಚನೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಿತಿ ನೀಡುವ ಅಂಶಗಳನ್ನು ಪರಿಗಣಿಸಿ ಮಹೋತ್ಸವ ನಡೆಸುವ ಕುರಿತು, ಏಳು ದಿನಗಳ ಒಳಗಾಗಿ ಸೂಕ್ತ ನಿರ್ಧಾರ ಹೊರಹಾಕಲಾಗುವುದು ಎಂದರು.
ಬೆಂಗಳೂರು ನಗರದ ಪ್ರತಿಷ್ಠಿತ ಕರಗಕ್ಕೆ ತನ್ನದೇ ಆದ ವೈಭವ ಇದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದೆ.ಅಲ್ಲದೆ, ಈ ಹಿಂದೆ ವ್ಯವಸ್ಥಾಪನ ಸಮಿತಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು, ಜತೆಗೆ ಉತ್ಸವ ಸಮಿತಿ ನೇಮಿಸಲಾಗಿದೆ. ಐದು ಅಥವಾ ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷವೂ ಕೋವಿಡ್ ಹಿನ್ನೆಲೆ
ಪೂಜೆ, ವಿಧಿವಿಧಾನಗಳ ಸಂಪ್ರದಾಯಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಈ ಬಾರಿಯೂ ಇದೇ ರೀತಿ ಮಾಡಲು ಚಿಂತನೆ ನಡೆಸಲಾಗಿದ್ದು, ಯಾವುದೇ ಮೆರವಣಿಗೆ, ಗುಂಪು ಸೇರುವುದಕ್ಕೆ ಅನುಮತಿ ನೀಡಲ್ಲ ಎಂದು ಆಯುಕ್ತರು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಸದ್ಯ ಮುಜರಾಯಿ ಇಲಾಖೆಯ ಆಯುಕ್ತರನ್ನೇ ದೇವಾಲಯದ ಆಡಳಿತಾಧಿಕಾರಿ ಆಗಿ ನೇಮಿಸಲಾಗಿದೆ. ಉತ್ಸವ ಸಮಿತಿ ರಚನೆ ಮಾಡುವುದು ಅವಶ್ಯಕತೆಯೂ ಇದೆ ಎಂದರು.
ಕರಗಕ್ಕೆ ತನ್ನದೇ ಆದ ಮಹತ್ವ ಇದೆ
ಅಲ್ಲದೆ, ಕಳೆದ ವರ್ಷ ಕೋವಿಡ್ ಉಲ್ಬಣ ಆಗಿದ್ದ ಕಾರಣ ಸಾಮೂಹಿಕ ಕರಗ ಇರಲಿಲ್ಲ. ಇನ್ನೂ, ಈ ಕುರಿತು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಉದಯ್ ಗರುಡಾಚಾರ್, ಪರಿಷತ್ತಿನ ಸದಸ್ಯ ರಮೇಶ್, ದೇವಾಲಯದ ಪ್ರಮುಖರು ಉಪಸ್ಥಿತರಿದ್ದರು.