ಬೆಂಗಳೂರು ಕರಗ ಸಂಪನ್ನ

ಐತಿಹಾಸಿಕ ಬೆಂಗಳೂರು ಕರಗ ಬೆಳಗಿನ ಸಂಪನ್ನಗೊಂಡಿತು. ಲಕ್ಷಾಂತರ ಜನರು ಕಣ್ತುಂಬಿಕೊಂಡರು.

ಬೆಂಗಳೂರು, ಏ.೨೪-ಚೈತ್ರ ಮಾಸದ ಶುದ್ಧ ಪೌರ್ಣಿಮೆ ರಾತ್ರಿಯ ಬೆಳದಿಂಗಳ ಬೆಳಕಲ್ಲಿ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಶ್ರದ್ಧಾ, ಭಕ್ತಿ, ವಿಜೃಂಭಣೆಯನ್ನು ಲಕ್ಷಾಂತರ ಭಕ್ತಾದಿಗಳು ಕಣ್ತುಂಬಿಕೊಂಡರು.ನಿನ್ನೆ ಬೆಳಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಭಜನೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು. ರಾತ್ರಿಯಿಡೀ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು ಮೊಳಗಿದವು. ಅದರಲ್ಲೂ ಉತ್ಸವದ ಅಂಗವಾಗಿ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಭಕ್ತಿ ಸಂಭ್ರಮ ಕಳೆಗಟ್ಟಿತ್ತು.ಪ್ರಮುಖವಾಗಿ ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಾಲಯದಿಂದ ಮಹಾಉತ್ಸವ ಆರಂಭವಾಗುತ್ತಿದ್ದಂತೆ ಗರ್ಭಗುಡಿಯಿಂದ ದ್ರೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ಸಂಪ್ರದಾಯ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದರುಮಲ್ಲಿಗೆ ಹೂವುಗಳಿಂದ ಮಿಂದೆದಿದ್ದ ಬೆಳ್ಳಿ ಮಿಶ್ರಿತ ಲೋಹದ ಕಿರೀಟವನ್ನು ತಲೆಯ ಮೇಲೆ ಹೊತ್ತು ಇಡೀ ರಾತ್ರಿ ತಿಗಳರಪೇಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿರುಸಾಗಿ ಕಾಲ್ನಡಿಗೆಯಲ್ಲೇ ಸಾಗಿದರು. ವೀರಕುಮಾರರು ಕೈಯಲ್ಲಿ ಕತ್ತಿ ಹಿಡಿದು ಕರಗ ರಕ್ಷಣೆ ಮಾಡುತ್ತಾ ಹೆಜ್ಜೆ ಹಾಕಿದ್ದು ಗಮನಸೆಳೆಯಿತು.ಮಂಗಳ ವಾದ್ಯದೊಂದಿಗೆ ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಇನ್ನೂ, ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಗಣಪತಿ ದೇವಾಲಯ ಮತ್ತು ಮುತ್ಯಾಲಮ್ಮ ದೇವಾಲಯ ದಲ್ಲಿ ಪೂಜೆ ಸ್ವೀಕರಿಸಿ ಮಹಾ ರಥೋತ್ಸವ ಸಾಗಿತು.ಹಲಸೂರು ಪೇಟೆಯ ಆಂಜನೇಯ ಸ್ವಾಮಿ, ಶ್ರೀರಾಮ ಮತ್ತು ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ನಗರ್ತಪೇಟೆಯ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿಯ ಭೈರೇದೇವರ ದೇವಾಲಯ, ಮಕ್ಕಳ ಬಸವಣ್ಣನ ಗುಡಿ ಮಾರ್ಗವಾಗಿ ಬಳೇಪೇಟೆ, ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ಸಿಟಿ ರಸ್ತೆ ಮೂಲಕ ಕುಂಬಾರಪೇಟೆ ಮುಖ್ಯರಸ್ತೆ ಪ್ರವೇಶಿಸಿತು.ಗೊಲ್ಲರಪೇಟೆ, ತಿಗಳರಪೇಟೆಗ ಕುಲಬಾಂಧವರ ಮನೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿತು. ಹಾಲು ಬೀದಿ, ಕಬ್ಬನ್ ಪೇಟೆ ಮೂಲ ಸುಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜಾದಿಗಳನ್ನು ಸ್ವೀಕರಿಸಿತು. ನರಸಿಂಹ ಜೋಯಿಸ್ ಗಲ್ಲಿ ಮೂಲಕ ಹಾದು ದೇವಾಲಯ ಸೇರಿತು. ಇದೇ ವೇಳೆ ಭಾವೈಕ್ಯತೆಯ ಸಂಗಮವಾದ ಅರಳೇಪೇಟೆಯ “ಮಸ್ತಾನ್ ಸಾಬ್ ದರ್ಗಾ’ ಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿ ನಂತರ ಕರಗ ಉತ್ಸವ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಶಾಸ್ತ್ರೋಕ್ತವಾಗಿ ನಡೆಯಿತು.ಸಿಎಂ ಭೇಟಿ: ಐತಿಹಾಸಿಕ ಬೆಂಗಳೂರು ಕರಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಮಂಗಳವಾರ ರಾತ್ರಿ ತಿಗಳರಪೇಟೆಯ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಕರಗ ಉತ್ಸವದ ಬಗ್ಗೆ ಸಿದ್ಧತೆ ಕುರಿತು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು. ಈ ವೇಳೆ ಬಿಡಿಎ ಅಧ್ಯಕ್ಷ ಹ್ಯಾರೀಸ್ ಮತ್ತಿತರಿದ್ದರು.