
ಬೆಂಗಳೂರು , ಏ ೬: ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ಇಂದು ಮಧ್ಯರಾತ್ರಿ ಆರಂಭವಾಗುವ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದೇಗುಲದ ಕರಗ ಮಹೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಕರಗ ನಡೆಯಲಿದ್ದು, ಇಂದು ಮಧ್ಯರಾತ್ರಿ ೧೨.೩೦ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಹೊರಲಿದ್ದಾರೆ. ೧೧ ದಿನಗಳು ನಡೆಯುವ ಕರಗ ಮಹೋತ್ಸವವು ಮಾರ್ಚ್ ೨೯ರಿಂದ ಪ್ರಾರಂಭವಾಗಿತ್ತು.
ಇಂದು ಸಂಜೆಯಿಂದಲೇ ಬಹುನಿರೀಕ್ಷೆಯ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ತಿಗಳರಪೇಟೆಯಲ್ಲಿರುವ ಧರ್ಮರಾಯ ದೇವಾಲಯದ ಮುಂದೆ ಜಮಾಯಿಸುತ್ತಾರೆ.
ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಕರಗ ಶಕ್ತ್ಯೋತ್ಸವ, ಹಲಸೂರು ಗೇಟ್ ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ಮಸ್ತಾನ್ ಸಾಬ್‌ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಲಾಗುತ್ತದೆ. ಹಾಲುಬೀದಿ, ಕಬ್ಬನ್‌ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನಂತರ ನರಸಿಂಹ ಜೋಯಿಸ್‌ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯ ತಲುಪಲಿದೆ.
ಕಲ್ಯಾಣಪುರಿ ನಾಮಧೇಯದಿಂದ ಪ್ರಖ್ಯಾತವಾಗಿರುವ ನಗರದ ತಿಗಳರಪೇಟೆಯ ಬೆಂಗಳೂರು ಕರಗ ಉತ್ಸವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಉತ್ಸವದಂದು ಕರಗಕರ್ತರು ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್‌ಸಾಹೇಬರ ದರ್ಗಾಕ್ಕೆ ಪದ್ಧತಿಯಂತೆ ಪೂಜೆ ಸಲ್ಲಿಸಲಿದ್ದಾರೆ.
ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್‌ಪೇಟೆಯ ಶ್ರೀರಾಮಸೇವಾ ಮಂದಿರ, ೧೫ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ಬಳಿಕಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್‌ಪೇಟೆ ರಸ್ತೆ, ಮಸ್ತಾನ್‌ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್‌ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಲಿದೆ.