ಬೆಂಗಳೂರು ಉತ್ತರ ವಿವಿಯಿಂದ ಸರ್ಕಾರಿ ಶಾಲೆ ದತ್ತು-ಪ್ರೊ.ನಿರಂಜನ

ಕೋಲಾರ,ಮಾ,೧೨- ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ನೀಡಿರುವ ಸೂಚನೆಯಂತೆ ಕೋಲಾರದ ಬೆಂಗಳೂರು ಉತ್ತರ ವಿವಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಪಬ್ಲಿಕ್ ಶಾಲೆಯನ್ನು ದತ್ತುಪಡೆದಿದ್ದು, ವಿವಿಯ ೧೦ ಲಕ್ಷ ಸೇರಿದಂತೆ ದೆಹಲಿಯ ಸೆಹಗಲ್ ಫೌಂಡೇಷನ್ ಸಹಯೋಗದಲ್ಲಿ ೧ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದ್ದಾರೆ.
ಈ ಯೋಜನೆಯ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯ ಸರ್ಕಾರ ವಿವಿಗಳು ಪ್ರಾಥಮಿಕ ಶಾಲೆ ದತ್ತುಪಡೆಯಲು ನೀಡಿರುವ ಅಣತಿಯಂತೆ ವಿವಿ ವ್ಯಾಪ್ತಿಯ ಬಾಗೇಪಲ್ಲಿಯ ಪಬ್ಲಿಕ್ ಶಾಲೆಯನ್ನು ದತ್ತು ಪಡೆಯಲು ಕ್ರಮವಹಿಸಿದ್ದು, ಅಲ್ಲಿನ ಅಭಿವೃದ್ದಿಗಾಗಿ ಮೈಸೂರಿನ ಪ್ರಥಮ್ ಸಂಸ್ಥೆಯ ಮೂಲಕ ನವದೆಹಲಿಯ ಸೆಹಗಲ್ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸಂಪರ್ಕಿಸಿದಾಗ ಸಂಸ್ಥೆ ಪದಾಧಿಕಾರಿಗಳು ಆಗಮಿಸಿ ಶಾಲೆಯನ್ನು ಪರಿಶೀಲಿಸಿ ವಿವಿಯ ೧೦ ಲಕ್ಷ ಸೇರಿದಂತೆ ಒಟ್ಟು ೧ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾರ್ಯ ನಡೆಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೂ ಸುಮಾರು ೧೨೦೦ ವಿದ್ಯಾರ್ಥಿಗಳು ೨ಸಂಗ ಮಾಡುತ್ತಿದ್ದು, ಶಾಲೆ ತೀರಾ ದುಸ್ಥಿತಿಯಲ್ಲಿದೆ, ಶೌಚಾಲಯ, ಕುಡಿಯು ನೀರು, ಪೀಠೋಪಕರಣಗಳ ಕೊರತೆ ಕಾಡುತ್ತಿದ್ದು, ಇದನ್ನು ಗಮನಿಸಿ ಈಶಾಲೆಯನ್ನು ದತ್ತುಪಡೆದು ಉದ್ದರಿಸಲು ವಿವಿ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಯ ಅಭಿವೃದ್ದಿಯ ಜತೆಗೆ ೪೦ ಲಕ್ಷ ವೆಚ್ಚದಲ್ಲಿ ಮಳೆ ನೀರು ಸಂಗ್ರಹಾಲಯ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಕೆಲಸಗಳು ಆರಂಭಗೊಂಡಿವೆ ಎಂದು ತಿಳಿಸಿದ್ದಾರೆ.
ದತ್ತು ಪಡೆದ ನಂತರ ಸದರಿ ಶಾಲೆಯಲ್ಲಿ ನಡೆದಿರುವ ಅಭಿವೃದ್ದಿ ಕೆಲಸಗಳನ್ನು ಕರ್ನಾಟಕ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ, ವಿವಿ ಕುಲಸಚಿವ ಡಾ.ವೆಂಕಟೇಶಮೂರ್ತಿ, ಸಿಂಡೀಕೆಟ್ ಸದಸ್ಯರಾದ ಡಾ.ಬಿ.ಆರ್.ಸುಪ್ರೀತ್, ಹೆಚ್.ವಿ.ವೆಂಕಟೇಶಪ್ಪ ಮತ್ತಿತರರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ೧೨೦೦ ವಿದ್ಯಾರ್ಥಿನಿಯರಿಗೆ ನ್ಯಾಯ ಒದಿಗಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದು, ಬೆಂಗಳೂರು ಉತ್ತರ ವಿವಿಯ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಗೆ ಮುಂದಾಗಿರುವ ಉತ್ತರ ವಿವಿ ಹಾಗೂ ಸೆಹಗಲ್ ಫೌಂಡೇಷನ್ ಕಾರ್ಯವನ್ನು ಅಭಿನಂದಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ೧೨೦೦ ಮಕ್ಕಳಿರುವ ಅತ್ಯಂತ ದೊಡ್ಡ ಶಾಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಬಿಇಒ ಸಿದ್ದಪ್ಪ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು ಇದ್ದರು.