ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವ ಕೃಷ್ಣಬೈರೇಗೌಡ ಇದ್ದಾರೆ.
ಬೆಂಗಳೂರು,ಜೂ.೨೭:ಬೆಂಗಳೂರು ನಗರದ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಂಪೇಗೌಡರು ಉತ್ತಮ ಆಡಳಿತಗಾರ ಇಂದು ಅವರನ್ನು ರಾಜ್ಯಾದ್ಯಂತ ಸ್ಮರಣೆ ಮಾಡಲಾಗುತ್ತಿದೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಕೆಂಪೇಗೌಡರ ಜಯಂತಿ ಪ್ರಯುಕ್ತ ವಿಧಾನಸೌಧ ಮುಂಭಾಗ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ದಕ್ಷ ಆಡಳಿತಗಾರರು, ಬೆಂಗಳೂರಿನ ಅಭಿವೃದ್ಧಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರ ಆಡಳಿತಾವಧಿಯಲ್ಲೇ ಜನಾಂಗಗಳ ವೃತ್ತಿಯಾಧರಿಸಿ ಪೇಟೆಗಳನ್ನು ನಿರ್ಮಿಸಿದ್ದರು ಎಂದರು.
ರಾಜ್ಯಾದ್ಯಂತ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಹಾಸನದಲ್ಲೂ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕೆಂಪೇಗೌಡರ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಆಚರಿಸುವ ನಿರ್ಧಾರ ಕಾಂಗ್ರೆಸ್ ಸರ್ಕಾರ ಕೈಗೊಂಡಿತ್ತು. ಕೆಂಪೇಗೌಡರ ಪ್ರಾಧಿಕಾರ ರಚನೆಯೂ ನಮ್ಮ ಸರ್ಕಾರಾವಧಿಯಲ್ಲೇ ಮಾಡಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಐದು ಜಿಲ್ಲೆಗಳಿಂದ ಆಗಮಿಸುವ ಕೆಂಪೇಗೌಡರ ಜಯಂತಿಯನ್ನು ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿ ಅವರಿಗೆ ನಮನ ಸಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.