ಬೆಂಗಳೂರಿನ ಶ್ವಾನಕ್ಕೆ ಅಮೆರಿಕನ್ ಪ್ರಶಸ್ತಿ


ಬೆಂಗಳೂರು, ಅ ೩೦- ಭಾರತದ ಶ್ವಾನಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಮ್ಯಾಂಟಿಕಾ ಡೆವಿ ತಳಿಯ ಸೈಬೀರಿಯನ್ ಹಸ್ಕಿ ಎಂಬ ಹೆಸರಿನ ಶ್ವಾನಕ್ಕೆ ಅತ್ಯುತ್ತಮ ತಳಿ ಎಂಬ ಅಮೆರಿಕನ್ ಚಾಂಪಿಯನ್ ಪಟ್ಟ ಲಭಿಸಿದೆ.
ಇತ್ತೀಚೆಗೆ ನಡೆದ ಅಮೇರಿಕನ್ ಕೆನ್ನೆಲ್ ಕ್ಲಬ್ ಡಾಗ್ ಶೋನಲಿ ಹಸ್ಕಿಗೆ ಈ ಪ್ರಶಸ್ತಿ ಲಭಿಸಿದೆ. ಈ ಹಸ್ಕಿಯನ್ನು ಬೆಂಗಳೂರಿನ ಮನೋಜ್ ಕೃಷ್ಣ ಸಿ. ಅವರು ಸಾಕುತ್ತಿದ್ದಾರೆ.
ರಷ್ಯಾ, ದಕ್ಷಿಣ ಕೊರಿಯಾ, ಬೆಲಾರಸ್ ಮತ್ತು ರೊಮೇನಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಿಶ್ವದ ಅತ್ಯುತ್ತಮ ತಳಿಗಳು ಎನಿಸಿರುವ ಸೈಬೀರಿಯನ್ ಹಸ್ಕಿ ಮತ್ತು ಚೋವ್ ಚೋವ್ ಎಂಬ ಶ್ವಾನದ ತಳಿಗಳನ್ನು ಹೊಂದಿದ್ದಾರೆ. ದೇಶಾದ್ಯಂತ ನಡೆಯುವ ಶ್ವಾನ ಪ್ರದರ್ಶನಗಳಲ್ಲಿ ರೊಮ್ಯಾಂಟಿಕಾ ಕೆನ್ನೆಲ್ಸ್ ಬ್ಯಾನರ್‌ನಡಿಯಲ್ಲಿ ಅವರು ತಮ್ಮ ಎಲ್ಲಾ ಶ್ವಾನಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಅವರು ಹೊಂದಿರುವ ಶ್ವಾನಗಳ ಪೈಕಿ ಬಹುತೇಕ ಶ್ವಾನಗಳು ಚಾಂಪಿಯನ್ ಪಟ್ಟ ಗಿಟ್ಟಿಸಿವೆ ಮತ್ತು ಪ್ರದರ್ಶನದ ಅತ್ಯುತ್ತಮ ಪ್ರಶಸ್ತಿಗಳನ್ನು ಗಳಿಸಿವೆ. ಭಾರತವಲ್ಲದೇ ಅಮೆರಿಕಾದಲ್ಲಿ ನಡೆಯುವ ಶ್ವಾನ ಪ್ರದರ್ಶನಗಳಲ್ಲಿಯೂ ಅವರು ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಪಾಲ್ಗೊಂಡಿದ್ದವು.
ಅಮೆರಿಕನ್ ಕೆನ್ನೆಲ್ ಕ್ಲಬ್‌ನ ಚಾಂಪಿಯನ್‌ಶಿಪ್ ಪಡೆಯಬೇಕೆಂದರೆ ಎರಡು ಪ್ರಮುಖ ಗೆಲುವುಗಳೊಂದಿಗೆ ೧೫ ಅಂಕಗಳನ್ನು ಗಳಿಸಬೇಕು. ತೀರ್ಪುಗಾರರ ಮಂಡಳಿಯಲ್ಲಿ ಕನಿಷ್ಠ ಮೂವರು ನಿರ್ದಿಷ್ಟ ತಳಿಗೆ ಅಧಿಕ ಅಂಕಗಳನ್ನು ನೀಡಿದರೆ ಆ ಶ್ವಾನ ಚಾಂಪಿಯನ್‌ಶಿಪ್ ಪಟ್ಟ ಗಿಟ್ಟಿಸುತ್ತದೆ. ಹೀಗೆ ಚಾಂಪಿಯನ್‌ಶಿಪ್ ಪಡೆಯಬೇಕಾದರೆ ಒಂದು ಶ್ವಾನವು ೫-೮ ಶ್ವಾನಗಳೊಂದಿಗೆ ಸ್ಪರ್ಧೆ ಮಾಡಿ ಅದರಲ್ಲಿ ಮೊದಲ ಸ್ಥಾನ ಪಡೆಯಬೇಕಾಗುತ್ತದೆ. ಇದೇ ರೀತಿ ಈ ಎಲ್ಲಾ ಮಾನದಂಡಗಳನ್ನು ಪೂರೈಸಿದ ಹಸ್ಕಿ ಅಮೆರಿಕನ್ ಚಾಂಪಿಯನ್‌ಶಿಪ್ ಅನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮನೋಜ್ ಕೃಷ್ಣ, ರೊಮ್ಯಾಂಟಿಕಾ ಡೆವಿ ೦೧-೦೪-೨೦೧೭ ರಂದು ಜನಿಸಿದ್ದು, ಇಂಟರ್‌ನ್ಯಾಷನಲ್ ಎಫ್‌ಸಿಐ ಡಾಗ್ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಪ್ರದರ್ಶನಕ್ಕೆ ಪಾದಾರ್ಪಣೆ ಮಾಡಿತ್ತಲ್ಲದೇ ಅತ್ಯುತ್ತಮ ಶ್ವಾನ ಎಂಬ ಪ್ರಶಸ್ತಿಯನ್ನೂ ಪಡೆಯಿತು.
ಇದಾಗ ಬಳಿಕ ದೇಶದ ಚಾಂಪಿಯನ್‌ಶಿಪ್‌ಗಳಲ್ಲಿ ಅತ್ಯುತ್ತಮ ಹೆಣ್ಣು ಹಸ್ಕಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಇದನ್ನು ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರದರ್ಶಿಸಬೇಕೆಂದು ನಿರ್ಧರಿಸಿದೆ. ಅದಂತೆ ಅಮೇರಿಕನ್ ಕೆನ್ನೆಲ್ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆಗಿಳಿಸಿ ಚಾಂಪಿಯನ್‌ಶಿಪ್ ಅನ್ನೂ ಪಡೆಯಲು ಸಾಧ್ಯವಾಯಿತು. ಇದು ಭಾರತೀಯ ಕೆನ್ನೆಲ್ ಕ್ಲಬ್‌ಗೆ ಹೆಮ್ಮೆ ತರುವಂತೆ ಮಾಡಿದೆ ಎಂದರು.