ಬೆಂಗಳೂರಿನ ಶಾಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆಗೆ ಸೂಚನೆ

ಬೆಂಗಳೂರು, ಸೆ.15- ಸಂಭಾವ್ಯ ಕೋವಿಡ್ ಮೂರನೇ ಅಲೆ ಹಿನ್ನೆಲೆ ಶಾಲೆಗಳಲ್ಲಿ ಎರಡು ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಗುಣಲಕ್ಷಣಗಳು ಕಂಡುಬರುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸಮಿತಿ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ಗುರುತಿಸಿ, 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಗುಣಲಕ್ಷಣಗಳು ಕಂಡುಬರುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನಗರದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಬಾರದಂತೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆ ಯಾವ ರೀತಿ ಮಾಡಬೇಕು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.

ನಗರದ ಎಲ್ಲಾ ಶಾಲೆಗಳಲ್ಲೂ ನೋಡಲ್ ಅಧಿಕಾರಿಯನ್ನು ಗುರುತಿಸಿ ಆ ಶಾಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಜೊತೆ ಶಾಲೆಯ ನೋಡಲ್ ಅಧಿಕಾರಿಯನ್ನು ಟೈ-ಅಪ್ ಮಾಡಬೇಕು.

ಶಾಲೆಗೆ ಬರುವ ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ದಿನಗಳ ಕಾಲ ಸೋಂಕು ಲಕ್ಷಣ ಕಂಡುಬಂದರೆ ಅಂತಹ ಮಕ್ಕಳನ್ನು ಶಾಲೆಗೆ ಬಾರದಂತೆ ತಿಳಿಸಬೇಕು. ಆ ಬಳಿಕ ಸೋಂಕು ಲಕ್ಷಣವಿರುವ ಮಕ್ಕಳ ಮಾಹಿತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರೆ ಅಂತಹ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ಮಾಡಬೇಕು ಎಂದರು.

ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಲಕ್ಷಣ ಕಂಡುಬರುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಬಹುತೇಕ ಮಕ್ಕಳಿಗೆ ನೆಗೆಟಿವ್ ಬರುತ್ತಿದೆ. ಈ ಸಂಬಂಧ 2 ದಿನಕ್ಕಿಂತ ಹೆಚ್ಚು ಸೋಂಕು ಲಕ್ಷಣಗಳಿರುವ ಹಾಗೂ ಇತರೆ ಖಾಯಿಲೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು ತಿಳಿಸಿದರು.

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲ ಬುಗ್ಗಿ, ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸದಸ್ಯರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.