ಬೆಂಗಳೂರಿನ ಐಟಿ ಸಿಟಿಗೆ ಎಂದು ಕೃಷ್ಣ ನಾಲೆಡ್ಜ್ ಸಿಟಿ ಎಂದು ಹೆಸರಿಡಲು ಸಚಿವ ಸುಧಾಕರ್ ಕರೆ

ಬೆಂಗಳೂರು, ಅ. 1- ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಐಟಿ ಪ್ರದೇಶಕ್ಕೆ ‘ಎಸ್.ಎಂ.ಕೃಷ್ಣ ನಾಲೆಡ್ಜ್ ಸಿಟಿ’ ಎಂದು ನಾಮಕರಣ ಮಾಡಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸರ್ಕಾರಕ್ಕೆ ಸಲಹೆ ನೀಡಿದರು.

ಚಿತ್ರಕಲಾ ಪರಿಷತ್ತಿನಲ್ಲಿ ನಡೆದ, ಡಾ.ಎನ್.ಜಗದೀಶ್ ಕೊಪ್ಪ ಬರೆದ ‘ನೆಲದ ಸಿರಿ- ಎಸ್.ಎಂ.ಕೃಷ್ಣ ಅವರ ಜೀವನಗಾಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವುದರಿಂದ, ಎಸ್.ಎಂ.ಕೃಷ್ಣ ಅವರ ಕೊಡುಗೆಯನ್ನು ಪರಿಗಣಿಸಿ ಐಟಿ ಕ್ಷೇತ್ರಕ್ಕೆ ಅವರ ಹೆಸರನ್ನೇ ಇಡಬಹುದು ಎಂದು ಸಲಹೆ ನೀಡಿದರು.

ಆಧುನಿಕ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರು ಕಟ್ಟಿದ್ದರು. ಅದೇ ರೀತಿ ಬೆಂಗಳೂರನ್ನು ಜಾಗತಿಕ ನಗರವಾಗಿ ಬೆಳೆಸಿದ ನಿರ್ಮಾತೃ ಎಂಬ ಹೆಸರು ಯಾವಾಗಲೂ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಾಗುವ ಒಟ್ಟು ರಫ್ತಿನಲ್ಲಿ ಬೆಂಗಳೂರು ಶೇ.40 ರಷ್ಟು ಪಾಲು ಹೊಂದಿದೆ. ಸುಮಾರು 5 ಲಕ್ಷ ಕೋಟಿ ರೂ. ಮೊತ್ತದ ರಫ್ತು ಇಲ್ಲಿ ನಡೆಯುತ್ತಿದೆ ಎಂದರು.

ಎಸ್.ಎಂ.ಕೃಷ್ಣ ಅವರಿಗೆ ಹೈಟೆಕ್ ಸಿಎಂ ಎಂಬ ಟೀಕೆ ಇತ್ತು. ಆದರೆ ನೀರಾವರಿ, ಸ್ತ್ರೀ ಶಕ್ತಿ ಸಂಘ, ಕೃಷಿ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯದ ಆಯವ್ಯಯ ಮೂರುವರೆ ಲಕ್ಷ ಕೋಟಿ ಮೊತ್ತವಾಗಿದ್ದರೆ, ಅದರಲ್ಲಿ ಅರ್ಧ ಬೆಂಗಳೂರಿನಿಂದ ಬರುತ್ತಿದೆ. ವಿದೇಶಿ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುವ ಹೊಸ ಪರಂಪರೆಯನ್ನು ಅವರು ಹುಟ್ಟುಹಾಕಿದರು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗ ಕಾವೇರಿ ಬಿಸಿ ಎದುರಿಸುತ್ತಿದ್ದಾರೆ. ಇದೇ ರೀತಿ ಎಸ್.ಎಂ.ಕೃಷ್ಣ ಅವರಿಗೆ ಕಾವೇರಿ ಸಮಸ್ಯೆ ಎದುರಾದಾಗ ಸ್ವಪಕ್ಷದ ನಾಯಕರೇ, ಕೃಷ್ಣ ಅವರು ಕಾವೇರಿಯಲ್ಲಿ ಮುಳುಗಿದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾತಾಡುತ್ತಿದ್ದರು. ಆದರೆ ಅವರಿಗೆ ರೈತರ ಬಗ್ಗೆ ಇದ್ದ ಬದ್ಧತೆ ಯಾರಿಗೂ ಇರಲಿಲ್ಲ. ಅಂತಹ ಎಪ್ಪತ್ತರ ವಯಸ್ಸಿನಲ್ಲಿಯೇ ಅವರು ಉರಿ ಬಿಸಿಲಿನಲ್ಲಿ ಪಾದಯಾತ್ರೆ ಮಾಡಿದ್ದರು ಎಂದರು.

ಎಸ್.ಎಂ.ಕೃಷ್ಣ ಅವರು ಕ್ರೀಡಾಪ್ರೇಮಿ ಹಾಗೂ ಉತ್ತಮ ಓದುಗ. ಅವರಿಗೆ ಸಂಗೀತದಲ್ಲೂ ಆಸಕ್ತಿ ಇದೆ. ಇದರಿಂದಾಗಿಯೇ ಅವರು ಯಾವಾಗಲೂ ಸಮಚಿತ್ತದಿಂದ ಇರುತ್ತಾರೆ ಎಂದರು.