ಬೆಂಗಳೂರಿನ ಅರಮನೆ ಮೈದಾನದಲ್ಲಿ 2 ಲಕ್ಷ ಜನರು ಭಾಗಿಏ.2ರಂದು ಶೋಷಿತರ ಸಂಕಲ್ಪ ಸಮಾವೇಶ

ಕಲಬುರಗಿ,ಮಾ 19: ತಳ ಸಮುದಾಯಗಳಲ್ಲಿ ರಾಜಕೀಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ಏಪ್ರಿಲ್ 2ರಂದು ಮಧ್ಯಾಹ್ನ 1ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶೋಷಿತರ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಹ ಸಂಚಾಲಕ ಮಾವಳ್ಳಿ ಶಂಕರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಸುಮಾರು ಎರಡು ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ತಳ ಸಮುದಾಯಗಳಿಗೆ ಲಭಿಸಬೇಕಾದ ಮೀಸಲಾತಿಯನ್ನು ಪ್ರಬಲ ಜಾತಿಗಳು ಪಡೆದುಕೊಳ್ಳುತ್ತಿವೆ. ಮೇಲಾಗಿ, ಇಂತಹ ಪ್ರಬಲ ಜಾತಿಗಳಿಗೆ ಸರಕಾರವೇ ಕುಮ್ಮಕ್ಕು ಕೊಟ್ಟು ಜಾತಿ ಆಧರಿತ ಮೀಸಲಾತಿ ಪಡೆಯಲು ಹೋರಾಟಗಳನ್ನು ರೂಪುಗೊಳ್ಳುವಂತೆ ನೋಡಿಕೊಳ್ಳುತ್ತಿದೆ. ಇಂತಹ ಬಹಿರಂಗ ಅನ್ಯಾಯವನ್ನು ಖಂಡಿಸುವುದರ ಜೊತೆಗೆ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಸಮಾವೇಶ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಈಗಾಗಲೇ ಮೇಲ್ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಇಡಬ್ಲ್ಯುಎಸ್ ಜಾರಿಗೆ ತರಲಾಗಿದೆ. ಮತ್ತೊಂದೆಡೆ, ಹೊಸ ಶಿಕ್ಷಣ ನೀತಿ ಜಾರಿಗೊಳಿಸಿ ತಳ ಸಮುದಾಯಗಳ ಶಿಕ್ಷಣದ ಹಕ್ಕು ಧಿಕ್ಕರಿಸಲು ವಿದ್ಯಾರ್ಥಿ ವೇತನ ನಿಲ್ಲಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿವೆ. ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಕಾಯ್ದೆ ಜಾರಿಯಾದರೂ ಅದರ ಸದಾಶಯಕ್ಕೆ ವಿರುದ್ಧವಾಗಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಕಾಯ್ದೆಯ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಹಲವು ಪ್ರಮುಖ ಅಂಶಗಳ ಮೇಲೆ ಸಮಾವೇಶದಲ್ಲಿ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಅವರು ಮಾತನಾಡಿ, ಶೋಷಿತ ಸಮುದಾಯಗಳಲ್ಲಿ ಜಾಗೃತಿಯ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾ ಒಕ್ಮೂಟ ರಚಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.
ಒಕ್ಕೂಟದ ಸಂಚಾಲಕ ಮಹಾಂತೇಶ್ ಎಸ್.ಕೌಲಗಿ, ಮುಖಂಡರಾದ ಲಾಲ್ ಅಹ್ಮದ್ ಸೇಠ್, ಬಸವರಾಜ ಮಾಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಶೋಷಿತರ ಸಂಕಲ್ಪ ಸಮಾವೇಶದಲ್ಲಿ ಕಲಬುರಗಿ ಜಿಲ್ಲೆಯಿಂದಲೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಅಗತ್ಯ ಸಂಘಟನಾ ಕಾರ್ಯ ಮಾಡಲಾಗುವುದು.
ಡಾ.ವಿಠ್ಠಲ ದೊಡ್ಡಮನಿ
ಹಿರಿಯ ದಲಿತ ಮುಖಂಡರು


ಶೋಷಿತ ಸಮುದಾಯಗಳ ಹಿತಾಸಕ್ತಿಯನ್ನು ಮೂಲೆಗುಂಪು ಮಾಡುವ ಯತ್ನಗಳು ಈಗ ಹೆಚ್ಚು ವೇಗವಾಗಿ ನಡೆಯುತ್ತಿವೆ. ಇಂತಹ ಆಘಾತಕಾರಿ ಬೆಳವಣಿಗೆ ತಡೆಯುವುದೇ ಶೋಷಿತರ ಸಂಕಲ್ಪ ಸಮಾವೇಶದ ಪ್ರಮುಖ ಆಶಯ.
ಅನಂತ ನಾಯಕ
ಸಂಚಾಲಕರು