ಬೆಂಗಳೂರಿನಲ್ಲೂ ಧಾರಾಕಾರ ಮಳೆ

ಬೆಂಗಳೂರು,ಜು.೩೧- ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯರಾತ್ರಿಯವರೆಗೂ ಮಳೆ ಸುರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಹಲವೆಡೆ ಮರಗಳು ಧರೆಗುರುಳಿ ಬಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು.
ಮಲ್ಲೇಶ್ವರ, ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು ರಾಜಭವನರಸ್ತೆ, ಶಿವಾಜಿನಗರ, ಪ್ಯಾಲೇಸ್‌ಗುಟ್ಟಹಳ್ಳಿ, ಶಿವಾನಂದ ವೃತ್ತ, ಹಲಸೂರು ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದ ದೃಶ್ಯಗಳು ಕಂಡು ಬಂದವು.
ಆರ್‌ಆರ್ ನಗರ, ಅಂಜನಾಪುರ, ಬೇಗೂರು, ಯಲಹಂಕ, ವಿದ್ಯಾರಣಪುರ, ಮಹದೇವಪುರ, ಹೊರಮಾವು, ಪುಲಿಕೇಶಿನಗರ, ನಾಗರಭಾವಿ, ಕೋರಮಂಗಲ, ಕೆಂಗೇರಿ, ಲಕ್ಕಸಂದ್ರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಮಳೆಯಿಂದಾಗಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ನಿಯಂತ್ರಣ ಕಚೇರಿ ತಿಳಿಸಿದೆ.