ಬೆಂಗಳೂರಿನಲ್ಲಿ 472 ಮಕ್ಕಳಲ್ಲಿ ಕೊರೋನಾ ಸೋಂಕು

ಬೆಂಗಳೂರು. ಮಾ.೨೮- ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಕೊರೋನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ಈ ತಿಂಗಳಲ್ಲಿ ೧೦ ವರ್ಷದ ೪೭೨ ಮಕ್ಕಳಿಗೆ ಸೋಂಕು ದೃಢಪಟ್ಟಿದೆ.
ಈ ವಾರಾಂತ್ಯದಲ್ಲಿ ಸೋಂಕು ಪ್ರಮಾಣ ೫೦೦ ಸಂಖ್ಯೆಯನ್ನು ಹಾಕುವ ಸಾಧ್ಯತೆಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
೪೭೨ ಮಂದಿ ಮಕ್ಕಳಲ್ಲಿ ೨೪೪ ಮಂದಿ ಗಂಡು ಮಕ್ಕಳು ಮತ್ತು ೨೨೮ ಮಂದಿ ಹೆಣ್ಣು ಮಕ್ಕಳಿಗೆ ಸೋಂಕು ತಗಲಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಕೊರೋನಾ ಸೋಂಕಿನ ಮೊದಲ ಅಲೆಯಲ್ಲಿ ಮಕ್ಕಳಿಗೆ ಅಷ್ಟೇನು ಸೋಂಕು ಕಾಣಿಸಿಕೊಂಡಿರಲಿಲ್ಲ ಆದರೆ ಎರಡನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಪೋಷಕರು ಹೆಚ್ಚು ಸಮಯ ಮನೆಯಿಂದ ಹೊರಗೆ ಕಳೆಯುತ್ತಿರುವುದು ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ರಾಜ್ಯ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ.
ಜೊತೆಗೆ ಬೆಂಗಳೂರಿನಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಇದು ಸಹಜವಾಗಿಯೇ ರಾಜ್ಯ ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಮಕ್ಕಳಲ್ಲಿ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಮತ್ತು ತಜ್ಞರ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮತ್ತಷ್ಟು ಭಯದ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಲಾಗಿದೆ