ಬೆಂಗಳೂರಿನಲ್ಲಿ ವರ್ಷಾಧಾರೆ ಸಾಯಿ ಲೇ ಔಟ್ ಜಲಾವೃತ

ಬೆಂಗಳೂರು, ಆ. ೩- ಕಳೆದ ನಾಲ್ಕು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವರ್ಷಾಧಾರೆಯಾಗುತ್ತಿದ್ದು, ಹಲವು ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.ನಗರದ ಸಾಯಿ ಲೇ ಔಟ್‌ನ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಭೈರತಿ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾತ್ರಿಯಿಂದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಠಿಯಾಗಿರುವ ಸಾಯಿ ಲೇ ಔಟ್ ನಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ. ಈ ಸಂಬಂಧ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ೧೭.೫ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುರಿದ ಭಾರೀಮಳೆಯಿಂದಾಗಿ ಆಟೋ ಮೇಲೆ ಉರುಳಿಬಿದ್ದ ಮರ.

ಸಾಯಿ ಲೇ ಔಟ್ ನಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ತಿಂಡಿ, ನೀರು, ಹಾಲು ವಿತರಿಸಿ, ಜನರನ್ನು ಸಮಾಧಾನಪಡಿಸಿದರು. ಈಗಲೂ ಈ ಬಡಾವಣೆಯಲ್ಲಿ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಜನರು ಹಾಗೂ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಮಳೆ ಬಂದಾಗಲೂ ಸಾಯಿ ಲೇ ಔಟ್‌ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಬೆಂಗಳೂರಿನ ಹಲವೆಡೆ ಭಾರಿ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಮುಂಜಾನೆ ಮಳೆಯಿಂದಾಗಿ ಚಾಮರಾಜಪೇಟೆಯಲ್ಲಿ ಆಟೋವೊಂದರ ಮೇಲೆ ಮರ ಬಿದ್ದಿದೆ. ಆದರೆ ಯಾವುದೇ ರೀತಿ ಪ್ರಾಣ ಹಾನಿಯಾಗಿಲ್ಲ. ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಪರಿಸ್ಥಿತಿ ಬಿಗಡಾಯಿಸಿದ್ದರು. ಪಾಲಿಕೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳಲು ವಿಫಲವಾಗಿದೆ ಎಂದು ನಾಗರಿಕರು ಕಿಡಿಕಾರಿದ್ದಾರೆ.