ಬೆಂಗಳೂರಿನಲ್ಲಿ ವರುಣನ ಅಬ್ಬರ, ಹಲವೆಡೆ ಅವಾಂತರ

(ಸಂಜೆವಾಣಿ ಪ್ರತಿನಿಧಿಯಿಂದ)
ರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆಗೆ ನಗರದ ದೀಪಾಂಜಲಿ ನಗರದಲ್ಲಿ ಟೆಂಪೋ ಮೇಲೆ ಭಾರಿ ಗಾತ್ರ ಮರವೊಂದು ಉರುಳಿ ಬಿದ್ದಿರುವುದು.

ಬೆಂಗಳೂರು,ಮೇ೧೧;ಕಳೆದ ೩-೪ ದಿನಗಳಿಂದ ಬೆಂಗಳೂರು ನಗರದಲ್ಲಿ ವರುಣನ ಅಬ್ಬರ ಜೋರಾಗಿದೆ. ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಆರ್‌ಆರ್‌ನಗರ, ಜ್ಞಾನಭಾರತಿ, ಏರ್‌ಪೋರ್ಟ್ ರಸ್ತೆ ಸೇರಿದಂತೆ ಹಲವು ರಸ್ತೆಗಳ ನೀರು ಉಕ್ಕಿ ಹರಿದು ಹಲವೆಡೆ ಮರಗಳು, ವಿದ್ಯುತ್ ಕಂಭಗಳು ಧರೆಗುರುಳಿ ಬಿದ್ದಿವೆ.ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ೨೫ಕ್ಕೂ ಹೆಚ್ಚು ವಾಹನಗಳು ಕೆಟ್ಟು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಯಿತು. ರಸ್ತೆಯಲ್ಲಿ ೩ ಅಡಿಯಷ್ಟು ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.
ನಾಗರಭಾವಿಯ ಎನ್‌ಜಿಎಫ್ ಬಡಾವಣೆಯ ೯ನೇ ಕ್ರಾಸ್‌ನಲ್ಲಿ ವಿದ್ಯುತ್ ಕಂಭ ಹಾಗೂ ಬೃಹತ್ ಮರ ಶೆಡ್ ಮೇಲೆ ಬಿದ್ದಿದೆ. ಆದರೆ, ಯಾವುದೇ ಪ್ರಾಣಹಾನಿ ಹಾಗೂ ಗಾಯಗಳಾಗಿಲ್ಲ. ಚಾಮರಾಜಪೇಟೆಯಲ್ಲೂ ವರುಣನ ಅಬ್ಬರದಿಂದಾಗಿ ತಗ್ಗು ಪ್ರದೇಶಗಳಲ್ಲಿರುವ
ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಬಿನ್ನಿಮಿಲ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಿಂದ ಹರಿದ ನೀರು ಅಕ್ಕ-ಪಕ್ಕದ ಮನೆಗಳಿಗೆ ನುಗ್ಗಿ ನಿವಾಸಿಗಳು ಪರಿತಪಿಸುವಂತಾಯಿತು.

ನಗರದ ರಾಜರಾಜೇಶ್ವರಿ ನಗರದಲ್ಲಿ ಭಾರಿ ಬಿರುಗಾಳಿಗೆ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಕಾರು ಜಖಂಗೊಂಡಿರುವುದು.
ನಾಲ್ಕು ದಿನ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ೪ ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜತೆಗೆ ೪೦ ರಿಂದ ೫೦ ಕಿ.ಮೀ ವೇಗದಲ್ಲಿ ಗಾಳಿ ಬೀಸಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದ್ದು, ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಲ್ಲಿ ಮಿಂಚು-ಗುಡುಗು ಸಹಿತ ಮಳೆ ಬೀಳಲಿದೆ. ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲೂ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿದೆ.
ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದ್ದು, ಬೀದರ್, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ.

ನಾಗರಭಾವಿಯಲ್ಲಿ ರಸ್ತೆಗೆ ಉರುಳಿ ಬಿದ್ದಿರುವ ಮರ ಅದರ ಮಧ್ಯ ಕಾರು ನಿಂತಿರುವುದು.

ಮಳೆಗೆ ಇಬ್ಬರು ಬಲಿ
ಮೈಸೂರು-ಕೊಡಗು ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬುವರ ಮೇಲೆ ಮನೆ ಮೇಲೆ ಹಾಕಿದ್ದ ಶೀಟ್ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮಡಿಕೇರಿಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಯುವಕ ಪ್ರಮಾರ್ ಗರ್ಮಾನಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಬಿರುಗಾಳಿ-ಮಿಂಚು-ಗುಡುಗು ಸಹಿತ ಮಳೆ ಸುರಿದಿದೆ. ಕುವೆಂಪು ನಗರ, ಕುರುಬರಹಳ್ಳಿ ಸೇರಿದಂತೆ ಹಲವೆಡೆ ಬಿರುಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮೈಸೂರು ನಗರಗಳಲ್ಲಿ ೩೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮಂಡ್ಯ, ಚಾಮರಾಜನಗರ,ಕೊಡಗು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.