
ಕಲಬುರಗಿ,ನ.12: ರಾಜ್ಯದ ರಾಜಧಾನಿ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾ ಭವನದಲ್ಲಿ ಇದೇ ನವೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ದಲಿತರ ಬೃಹತ್ ಶೃಂಗಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶಕುಮಾರ್ ರಾಠೋಡ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗಸಭೆಯಲ್ಲಿ ರಾಜ್ಯದ ಅಕ್ಯಾಡೆಮಿಸಿಯನ್ಸ್, ಚಳುವಳಿಗಾರರು, ಆಡಳಿತದಲ್ಲಿ ಇರುವ ಐಎಎಸ್, ಐಪಿಎಸ್ ಮುಂತಾದ ಅಧಿಕಾರ ವರ್ಗದಲ್ಲಿರುವವರು ಎಲ್ಲರೂ ಪಾಲ್ಗೊಳ್ಳುವರು. ರಾಜ್ಯದ ದಲಿತರ ದಿಕ್ಕು ದೆಸೆಗಳು, ಸಾಮಾಜಿಕ, ರಾಜಕೀಯ, ಆರ್ಥಿಕ ದಿಕ್ಕು ದೆಸೆ ಕುರಿತು ಶೃಂಗಸಭೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಒಂಭತ್ತು ವರ್ಷಗಳಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ಅತ್ಯಂತ ದೊಡ್ಡದಾದ ಹಲ್ಲೆ, ದೌರ್ಜನ್ಯಗಳನ್ನು ಆಗಿವೆ. ಅಲ್ಲದೇ ಅನೇಕ ಸಂವಿಧಾನ ಬಾಹಿರ ಕೃತ್ಯಗಳೂ ಸಹ ಸಂಭವಿಸಿವೆ. ಅವುಗಳೆಲ್ಲವನ್ನೂ ಎದುರಿಸಲು 13 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂತಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಶೃಂಗಸಭೆಯನ್ನು ರಾಜ್ಯದ ನೂತನ ಶಿಕ್ಷಣ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ತೋರಟ್ ಅವರು ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಸಿದ್ದಣಗೌಡ ಪಾಟೀಲ್, ಮಲ್ಲಂಪಲ್ಲಿ, ಎ. ರಾಮಮೂರ್ತಿ ಮುಂತಾದವರು ಆಗಮಿಸುವರು. ಶೃಂಗಸಭೆಗೆ 650ಕ್ಕಿಂತ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು. ಮುಂದಿನ ಚಳುವಳಿ, ನಡೆಯ ಕುರಿತು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.